ಚಿಕ್ಕಮಗಳೂರು: ಮಂಗಳೂರು ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದೃಢೀಕರಿಸಿದ ಪ್ರಮಾಣ ಪತ್ರವನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿರುವುದಾಗಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ಅಂಗೀರಸ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅತ್ಯಾಚಾರಕ್ಕೊಳಗಾದ ಸೌಜನ್ಯಳ ಕುಟುಂಬಸ್ಥರು ಬಡವರಾಗಿದ್ದು ಕೊಲೆಯ ಆರೋಪಿಗಳನ್ನು ಬಂಧಿಸುವಂತೆ ಧರ್ಮಸ್ಥಳ ಆರಕ್ಷಕ ಠಾಣೆಗೆ ದೂರು ನೀಡಿದ್ದು, ಸದರಿ ದೂರನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಿ ಸರ್ಕಾರ ಹಾಗೂ ದುಷ್ಕರ್ಮಿಗಳ ಒತ್ತಡಕ್ಕೆ ಮಣಿದು ಸೌಜನ್ಯ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಈ ಪ್ರಕರಣದ ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಪೋಲೀಸ್ ಇಲಾಖೆ ಸಂತೋಷ್ರಾವ್ ಎಂಬ ಅಮಾಯಕ ನಿರಪರಾಧಿಯ ಮೇಲೆ ಎಫ್ಐಆರ್ ದಾಖಲಿಸಿ ಶಿಕ್ಷೆ ಆಗುವಂತೆ ಮಾಡಿದ ಪರಿಣಾಮ ೧೨ ವರ್ಷಗಳಿಂದ ಜೈಲು ವಾಸ ಅನುಭವಿಸುವಂತಾಗಿದೆ ಎಂದರು.
ಇದೀಗ ಸಿಬಿಐ ವಿಶೇಷ ನ್ಯಾಯಾಲಯದ ಪೋಲೀಸರು ಸಂತೋಷ್ರಾವ್ ನಿರ್ದೂಷಿ ಎಂದು ತೀರ್ಪು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು.
ಆದರೆ ಮುಂದಿನ ಹಂತದ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಈ ಅಮಾಯಕನನ್ನು ಮತ್ತೊಮ್ಮೆ ಜೈಲಿಗಟ್ಟಲು ಎಲ್ಲಾ ತಂತ್ರಗಳನ್ನು ಉಪಯೋಗಿಸುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಈ ಹಂತದಲ್ಲಿ ಮಾನವ ಹಕ್ಕು ಆಯೋಗವು ಮಧ್ಯೆ ಪ್ರವೇಶಿಸಿ ಸಂತೋಷ್ ರಾವ್ ಎಂಬ ಅಮಾಯಕನ ಮೇಲೆ ನಡೆದಿರುವ ಮಾನವ ಹಕ್ಕಿನ ಉಲ್ಲಂಘನೆಯ ನೈಜತೆಯನ್ನು ತನಿಖೆ ಮಾಡಿ ೧೨ ವರ್ಷಗಳ ಕಾಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗುವಂತೆ ಮಾಡಿದ ಪೋಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಒತ್ತಾಯಿಸಿದರು.
ಸಮಾಜಕ್ಕೆ, ಬಡವರಿಗೆ, ಅಮಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸಾಂವಿಧಾನಿಕ ಮಾನವ ಹಕ್ಕಿನ ಕುರಿತು ಇರುವ ಜೇಷ್ಠತೆಯನ್ನು ಕಾಪಾಡಬೇಕೆಂದು ಪ್ರಾರ್ಥಿಸಿ ಪ್ರಾಮಾಣೀಕರಿಸಿದ ಪ್ರಮಾಣ ಪತ್ರದ ಮೂಲಕ ಮನವಿ ಸಲ್ಲಿಸಿದ್ದು ಈ ಘಟನೆಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯೋಗ ಕೋರಿದರೆ ಸಲ್ಲಿಸಲು ಸಂಘಟನೆ ಸಿದ್ದವಿದೆ ಎಂದು ತಿಳಿಸಿದರು.
Demand for the arrest of the real accused in the courtesy case