ಚಿಕ್ಕಮಗಳೂರು: ತಾಲ್ಲೂಕಿನ ಸಿರವಾಸೆ ಸಮೀಪದ ಸಿದ್ದಾಪುರದಲ್ಲಿ ಮುತ್ತಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣವನ್ನು ಮರು ತನಿಖೆ ನಡೆಸಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿರುವುದಾಗಿ ಮೃತ ಮಹಿಳೆಯ ಪುತ್ರ ಭದ್ರಾವತಿಯ ಗುಡ್ರುಕೊಪ್ಪದ ಕುಮಾರ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದಾಪುರದಲ್ಲಿ ಜೂ.೧೩ ರಂದು ನನ್ನ ತಾಯಿ ಕೊಲೆ ನಡೆದಿರುವುದಾಗಿ ಪೊಲೀಸರು ನಮಗೆ ತಿಳಿಸಿದ್ದಾರೆ. ನಮ್ಮ ತಾಯಿಯನ್ನು ಸುಟ್ಟುಹಾಕಿರುವ ಜಾಗ ತೋರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿ ಬೂದಿಯೊಂದಿಗೆ ನಮ್ಮನ್ನು ಕಳುಹಿಸಿದರು. ಇದೀಗ ನಮ್ಮ ತಾಯಿಯ ಕೊಲೆ ಮಾಡಿರುವ ನೈಜ ಆರೋಪಿಗಳು ಹೊರಗಿದ್ದಾರೆ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ಹೀಗಾಗಿ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಆಗ್ರಹಿಸಿ ಪತ್ರ ಬರೆದಿರುವುದಾಗಿ ತಿಳಿಸಿದರು.
ಎಸ್ಡಿಪಿಐ ಮುಖಂಡ ಅಂಗಡಿ ಚಂದ್ರು ಮಾತನಾಡಿ, ಸಿದ್ದಾಪುರದಲ್ಲಿ ಮಹಿಳೆ ಮುತ್ತಮ್ಮ ಅವರನ್ನು ಕೊಲೆ ಮಾಡಿರುವ ನೈಜ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಪೊಲೀಸರು ಮಾಡಿರುವ ಸಂಶಯವಿದೆ. ಹೀಗಾಗಿ ತನಿಖೆ ನಡೆಸಿರುವ ಪೊಲೀಸರು, ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದೇವೆ ಎಂದರು.
ಡಿಎಸ್ಎಸ್ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಈಗ ಬಂಧಿತನಾಗಿರುವ ಆರೋಪಿ ಒಬ್ಬನೇ ಶವವನ್ನು ೨ ಕಿಮೀ ಹೊತ್ತುಕೊಂಡು ಹೋಗಿ ಸುಟ್ಟುಹಾಕಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆ ಇದೆ. ಕಾಫಿ ತೋಟದ ಮಾಲೀಕ ಮತ್ತು ಪುತ್ರನ ಮೇಲೆ ಅನುಮಾನವಿದೆ. ಅವರನ್ನು ತನಿಖೆಗೊಳಪಡಿಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕು ಎಂದು ಒತ್ತಾಯಿಸಿದ್ದೇವೆ ಎಂದರು. ಮೃತ ಮಹಿಳೆಯ ಮತ್ತೋರ್ವ ಪುತ್ರ ವೆಂಕಟೇಶ್, ಸಂತೋಷ್ ಇದ್ದರು.
Demand for re-investigation in Siddapur woman’s murder case