ಚಿಕ್ಕಮಗಳೂರು: ಸರ್ಕಾರ ಯಾವುದೇ ಇರಲಿ ಇದ್ದಂತ ಸಂದರ್ಭದಲ್ಲಿ ಬಡವರಿಗೆ, ಶೋಷಿತರಿಗೆ, ದೀನ ದಲಿತರಿಗೆ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಮನೋಭಾವ ಮನಸ್ಸು ಇರಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಯನ್ನು ವಿತರಿಸಿ ಮಾತನಾಡಿದರು.
ಬಡವರ ಬಗ್ಗೆ ಕನಿಕರ ಇರುವ ತಾಯಿ ಹೃದಯ ಇರಬೇಕು, ಅಂತಹವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲಿಗರಾಗಿದ್ದು ರಾಜ್ಯದಲ್ಲಿ ಅವರು ಬಡವರ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಾನು ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳಡಿ ಬಡವರು, ಹಿರಿಯ ನಾಗರೀಕರಿಗೆ ಪಿಂಚಣಿ ಸೌಲಭ್ಯಗಳನ್ನು ನೇರವಾಗಿ ಕಲ್ಪಿಸುವ ವ್ಯವಸ್ಥೆಗೆ ಬದ್ದರಾಗಬೇಕು, ಫಲಾನುಭವಿಗಳನ್ನು ಗೌರವದಿಂದ ಕಾಣುವುದರ ಜೊತೆಗೆ ಅವರಲ್ಲಿ ಬದುಕಿನ ಭರವಸೆ ಮೂಡಿಸುವ ನಿಟ್ಟಿನಲ್ಲಿ ತಾ.ಪಂ ಅಧಿಕಾರಿಗಳು ಮತ್ತು ತಾಲ್ಲೂಕು ಕಛೇರಿ ಸಿಬ್ಬಂದಿ ಶ್ರಮಿಸಬೇಕೆಂದು ಸೂಚಿಸಿದರು.
ಬಡವರ ಹಕ್ಕನ್ನು ಉಳ್ಳವರು ಕಿತ್ತುಕೊಳ್ಳದಂತೆ ಎಚ್ಚರವಹಿಸಬೇಕು ಎಲ್ಲಾ ಜಾತಿ ಜನಾಂಗದಲ್ಲಿಯೂ ಬಡವರಿದ್ದಾರೆ, ಅವರಿಗೆ ಸರ್ಕಾರದ ಈ ಸೌಲತ್ತುಗಳು ಸಿಗಬೇಕು ವಯಸ್ಸಿನ ವಯೋಮಿತಿಯನ್ನು ನಿಖರವಾಗಿ ಪರಿಗಣಿಸಲಾಗದು ಆದ್ದರಿಂದ ಮಾನವೀಯತೆ ಆಧಾರದಲ್ಲಿ ಸೌಲಭ್ಯ ಕೊಡಬೇಕೆಂದು ಹೇಳಿದರು.
ವಿಧವಾ ವೇತನ ಮಂಜೂರು ಮಾಡುವಾಗಲೇ ರಾಷ್ಟ್ರೀಯ ಕುಟುಂಬ ಯೋಜನೆಯಡಿ ೨೦ ಸಾವಿರ ರೂ. ಕೊಡುವ ಬಗ್ಗೆ ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸಿ ಅರ್ಜಿಯನ್ನು ಪಡೆದು ಸೌಲಭ್ಯ ಕೊಡುವಂತಾಗಬೇಕು ಇದು ಸಮರ್ಪಕವಾಗಿ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರುತ್ತದೆ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ೫ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ೪ ನ್ನು ಅನುಷ್ಠಾನಕ್ಕೆ ತರಲಾಗಿದ್ದು, ರಾಜ್ಯದ ಎಲ್ಲಾ ನಾಗರೀಕರು ಸೌಲಭ್ಯಗಳನ್ನು ಪಡೆದು ಸಂತಸಪಡುತ್ತಿದ್ದಾರೆ ಎಂದ ಅವರು ಭಾಗ್ಯಲಕ್ಷ್ಮಿ ಯೋಜನೆಯಡಿ ಆ.೨೭ ರಿಂದ ಪ್ರತಿ ಕುಟುಂಬದ ಯಜಮಾನಿ ಖಾತೆಗೆ ೨೦೦೦ ರೂ. ಜಮೆಯಾಗಲಿದೆ, ಸರ್ಕಾರದ ಈ ಸೌಲಭ್ಯಗಳು ಬಡವರಿಗಾಗಿ ಜಾರಿಗೆ ತಂದಿದ್ದು, ಈ ಸೌಲಭ್ಯಗಳು ಬಡವರ ಬದುಕಿಗೆ ಮೀಸಲಿಡುವಂತೆ ಕಿವಿಮಾತು ಹೇಳಿದರು.
ತಹಶೀಲ್ದಾರ್ ಸುಮಂತ್ ಮಾತನಾಡಿ ಇಂದು ಕಂದಾಯ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಹಲವು ಪಿಂಚಣಿ ಸೌಲಭ್ಯಗಳನ್ನು ವಿತರಣೆ ಮಾಡುತ್ತಿದ್ದು ಅದರಂತೆ ೬೦ ವರ್ಷದವರಿಗೆ ವೃದ್ಧಾಪ್ಯ ವೇತನ ಮಾಸಿಕ ೬೦೦ ರೂ, ಸಂಧ್ಯಾಸುರಕ್ಷಾ ಯೋಜನೆಯಡಿ ಪ್ರತಿ ಫಲಾನುಭವಿಗೆ ೧೨೦೦ ರೂ. ಶೇ.೪೦ ರಿಂದ ೭೦ ರಷ್ಟು ಇರುವ ವಿಕಲಚೇತನರಿಗೆ ೧೪೦೦ ಮಾಸಿಕ ಪಿಂಚಣಿ, ಶೇ.೭೦ ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಗೆ ೨೦೦೦ ರೂ. ವಿಧವೆಯರಿಗೆ ೧೨೦೦ ರೂ. ನೀಡಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಕಳೆದ ೨ ತಿಂಗಳಿನಿಂದ ಕ್ಷೇತ್ರದಾದ್ಯಂತ ಸುಮಾರು ೧೦೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇಂದು ಶಾಸಕ ಹೆಚ್.ಡಿ ತಮ್ಮಯ್ಯನವರಿಂದ ಆದೇಶ ಪ್ರತಿಯನ್ನು ಎಲ್ಲರಿಗೂ ವಿತರಣೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಓ ತಾರಾನಾಥ್ ಮತ್ತು ಸಿಬ್ಬಂಧಿ ಹಾಗು ತಾಲ್ಲೂಕು ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Meeting distributed per pension order to the beneficiaries of various schemes