ಚಿಕ್ಕಮಗಳೂರು: ನಾವು ಭಾರತೀಯರು, ಸ್ವತಂತ್ರರೆಂದು ಘೋಷಿಸಿಕೊಂಡು ನಮ್ಮ ಹೆಮ್ಮೆಯ, ಅಭಿಮಾನದ ಬಾವುಟವನ್ನು ಮುಗಿಲ ಎತ್ತರಕ್ಕೆ ಹಾರಿಸಿ ಇಂದಿಗೆ ೭೬ ವರ್ಷಗಳು ಕಳೆದಿವೆ. ಭಾರತವನ್ನು ವಿಶ್ವದ ಅಗ್ರ ರಾಷ್ಟ್ರವನ್ನಾಗಿ ಮಾಡಲು, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಕಟ್ಟಲು ನಾವೆಲ್ಲ ಶ್ರಮಪಟ್ಟು ದುಡಿಯಬೇಕು ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಮಂಗಳವಾರ ಏರ್ಪಡಿಸಿದ್ದ ೭೭ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಪೂರ್ವಜರು ಸುಮಾರು ೨೦೦ ವರ್ಷಗಳ ಕಾಲ ದಾಸ್ಯದ ಸಂಕೋಲೆಯೊಳಗೆ ಸಿಲುಕಿ ನಲುಗಿ ಹೋಗಿದ್ದರು. ಈ ಒಂದು ಸಂಭ್ರಮದ ಕ್ಷಣವನ್ನು ಅನುಭವಿಸಲು ಅವರೆಲ್ಲರೂ ಕ್ಷಣ ಕ್ಷಣದ ತಪಸ್ಸನ್ನು ಮಾಡಿದ್ದಾರೆ. ತಮ್ಮ ಜೀವನವನ್ನು ಧಾರೆ ಎರೆದು ದೇಶದ ಸ್ವಾತಂತ್ರ್ಯದ ಹಂಬಲವನ್ನು ಮಾತ್ರ ಧ್ಯೇಯವಾಗಿಟ್ಟುಕೊಂಡು ಹಗಲಿರುಳು ಹೋರಾಡಿದ್ದಾರೆ ಎಂದರು.
ತಮ್ಮ ವೈಯಕ್ತಿಕ ಸುಖ, ಸಂತೋಷ ಎಲ್ಲವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಬಲಿಯಾದವರು, ಹೋರಾಟದಲ್ಲಿ ಪೆಟ್ಟು ತಿಂದ, ಸೆರೆಮನೆ ವಾಸ ಅನುಭವಿಸಿದ ಸಹಸ್ರಾರು ದೇಶಭಕ್ತರನ್ನು ನೆನಪಿಸಿಕೊಳ್ಳುವ ಮತ್ತು ಆ ರಾಷ್ಟ್ರಭಕ್ತರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಮರ್ಪಿಸುವ ಸಮಯ ಇದಾಗಿದೆ, ನಮ್ಮ ಈ ಸ್ವಾತಂತ್ರ್ಯದ ಉಸಿರಿಗಾಗಿ ಹಲವು ರೀತಿಯ ಹೋರಾಟದ ಯಜ್ಞದಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ತ್ಯಾಗಜೀವಿಗಳಾದ ಮಹಾತ್ಮ ಗಾಂಧೀಜಿ, ಗೋಪಾಲಕೃಷ್ಣ ಗೋಖಲೆ, ಲಾಲ ಲಜಪತ್ ರಾಯ್, ಭಗತ್ ಸಿಂಗ್, ಅರವಿಂದ ಘೋಷ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ..ಬಿ.ಆರ್.ಅಂಬೇಡ್ಕರ್, ಡಾ. ಮೌಲಾನಾ ಅಬ್ದುಲ್ ಕಲಾಂ ಆಜದ್, ಸುಭಾಷ್ ಚಂದ್ರ ಬೋಸ್, ಅನಿಬೇಸೆಂಟ್. ಇಂತಹ ಹಲವು ಮಹನೀಯರ ಜೊತೆಗೆ ಕರ್ನಾಟಕದ ಮಹಾನೀಯರುಗಳಾದ, ಟಿ. ಸುಬ್ರಹ್ಮಣ್ಯಂ, ಕಾರ್ನಾಡ್ ಸದಾಶಿವರಾವ್, ಶ್ರೀನಿವಾಸರಾವ್ ಕೌಜಲಗಿ, ನಿಟ್ಟೂರು ಶ್ರೀನಿವಾಸ್ ರಾವ್ ಮೊದಲಾದವರುಗಳ ಹೋರಾಟದ -ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಳು ನಡೆದವು. ಅವುಗಳಲ್ಲಿ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟ; ವಿದೇಶಿ ವಸ ವಸ್ತುಗಳ ಬಹಿಷ್ಕಾರ; ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು; ಖಾದಿ ವಸ್ತ್ರಬಳಕೆ ಮಾಡುವುದು, ಕಾನೂನು ಭಂಗ ಚಳವಳಿ ಇಂತಹ ಅನೇಕ ಹೋರಾಟಗಳು ಜಿಲ್ಲೆಯಿಂದ ದಾಖಲಾಗಿವೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲಿ ಬ್ರಿಟೀಷರ ವಿರುದ್ಧ ತಿರುಗಿ ನಿಂತ ಮೊದಲಿಗರಲ್ಲಿ ತರೀಕೆರೆ ಪಾಳೆಗಾರರು ಪ್ರಮುಖರು. ಪಾಳೆಗಾರ ರಂಗಪ್ಪನಾಯಕರು ಬ್ರಿಟೀಷರ ಬಂಧನದಲ್ಲಿ ೨೫ ವರ್ಷ ಕಳೆದು ಸೆರೆಯಿಂದ ತಪ್ಪಿಸಿಕೊಂಡು ಬಂದು ಬ್ರಿಟೀಷರ ವಿರುದ್ಧದ ಹೋರಾಟದಲ್ಲೇ ಅಸುನೀಗಿದರೆ ಇವರ ಮಗ ಸಜ ಹನುಮಪ್ಪನಾಯಕರು ಬ್ರಿಟಿಷರ ಮೋಸದ ಬಲೆಗೆ ಸಿಲುಕಿ ಗಲ್ಲಿಗೇರಿದರು. ನಮ್ಮ ಜನಪದರು ಲಾವಣಿಯ ರೂಪದಲ್ಲಿ ಈ ಪ್ರಸಂಗವನ್ನು ಹಿಡಿದಿಟ್ಟು ಹಾಡುವುದನ್ನು ಕೇಳಿದ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದಿರುವ ನೋವುಗಳು ಅರ್ಥವಾಗುತ್ತದೆ ಎಂದರು.
ಈ ಎಲ್ಲಾ ರೀತಿಯ ಸಂಘಟನೆಗಳ ಹೋರಾಟ ೧೯೪೭ರ ಆಗಸ್ಟ್ ೧೫ ರಲ್ಲಿ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯದ ಫಲವನ್ನು ಕೊಡಿಸುವಲ್ಲಿ ಯಶಸ್ವಿಯಾಯಿತು. ದೇಶಕ್ಕೆ ದೇಶವೇ ಸಂಭ್ರಮಿಸಿದ ಹಬ್ಬದಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯ ಉಸಿರೂ ಸೇರಿತ್ತು. ಆ ಸಂಭ್ರಮವನ್ನು ಅನುಭವಿಸುವ ಈ ಸಮಯದಲ್ಲಿ ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ನಮನಗಳು ಎಂದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಉಪಸ್ಥಿತರಿದ್ದರು.
State Energy and District In-charge Minister K.J. George