ಚಿಕ್ಕಮಗಳೂರು: ವಿದ್ಯೆ ಅನ್ಯರು ಕೈವಶ ಮಾಡಿಕೊಳ್ಳಲಾಗದ ಅಪೂರ್ವ ಸಂಪತ್ತು, ಕಲಿಕೆಯಲ್ಲಿ ವಿದ್ಯಾರ್ಥಿಗಳು ಪ್ರಜ್ಞಾ ಪೂರ್ವಕವಾಗಿ ತೊಡಗಿಸಿಕೊಂಡರೆ ಯಶಸ್ಸು ಸಿಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
ಐಡಿಎಸ್ಜಿ ಸರ್ಕಾರಿ ಕಾಲೇಜಿನ ೨೦೨೨-೨೩ನೆಯ ಸಾಲಿನ ಸಾಂಸ್ಕೃತಿಕ ಕ್ರೀಡಾ ಮತ್ತಿತರ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಕಾಲೇಜಿನ ಕುವೆಂಪು ವೇದಿಕೆಯಲ್ಲಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಶಿಕ್ಷಣ ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ವಿದ್ಯೆ ಎಂಬ ಆಸ್ತಿಯನ್ನು ಯಾರೂ ಕಳವು ಮಾಡಲು ಸಾಧ್ಯವಿಲ್ಲ. ಮನಸ್ಸಿಟ್ಟು ಓದಿ ಜ್ಞಾನಾರ್ಜನೆ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಸರ್ವಾಂಗೀಣ ವಿಕಾಸಕ್ಕೆ ಅತ್ಯಗತ್ಯ. ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಸದೃಢತೆ ಹೊಂದಬಹುದು. ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತವೆ. ಓದಿನಷ್ಟೇ ಪ್ರಾಮುಖ್ಯತೆಯನ್ನು ಆಸಕ್ತಿ ಇರುವ ವಿವಿಧ ಒಳ್ಳೆಯ ಚಟುವಟಿಕೆಗಳಿಗೆ ತೋರಿಸಿ ಸಾಧನೆ ಮಾಡಿದರೆ ಬದುಕು ಕಟ್ಟಿಕೊಳ್ಳಬೇಕೆಂದು ತಮ್ಮಯ್ಯ ನುಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಮಾರೋಪ ನುಡಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಪ್ರಭುತ್ವದ ಹೊಣೆಗಾರಿಕೆ. ಬುದ್ಧ, ಬಸವ, ಅಬೇಡ್ಕರ್ ವಿಚಾರಧಾರೆಯಲ್ಲಿ ನಾಡು ಕಟ್ಟಬೇಕು. ಹಿರಿಯರು ’ಸರ್ವೇಜನಾ ಸುಖೇನೋಭವಂತು’ ಎಂದಿದ್ದರು. ಇಡೀ ವಿಶ್ವವೇ ಒಂದು ಕುಟುಂಬದಲ್ಲಿರ ಬೇಕೆಂದು ಬಯಸಿದ ದೇಶ ಭಾರತ. ಈ ಆಶಯಗಳನ್ನು ಮುಂದುವರೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾಲೇಜು ಪ್ರಾಂಶುಪಾಲೆ ಡಾ.ಕೆ.ಸಿ.ಚಾಂದಿನಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ, ಸಮಯಪಾಲನೆ ರೂಢಿಸಿಕೊಂಡರೆ ಯಶಸ್ಸು ಗಳಿಸಬಹುದೆಂದರು.
ಕಾಲೇಜು ಕ್ರೀಡಾಸಮಿತಿ ಸಂಚಾಲಕ ಪ್ರೊ.ಕೆ.ಎಸ್.ಲಕ್ಷ್ಮೀಕಾಂತ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ವಿ.ವಿ.ಅಗತ್ಯ. ಕಾಲೇಜಿಗೆ ಅಗತ್ಯವಿರುವ ಶುದ್ಧಕುಡಿಯುವ ನೀರಿನ ವ್ಯವಸ್ಥೆ, ಮುಂಭಾಗದ ಉದ್ಯಾನವನ ನವೀಕರಣ ಜೊತೆಗೆ ಪೀಠೋಪಕರಣ, ಕಾಲೇಜಿನಸುತ್ತ ಹೈಮಾಸ್ಕ್ ಲೈಟ್, ಕಟ್ಟಡದ ದುರಸ್ತಿ ಹಾಗೂ ನವೀಕರಣ, ಅತ್ಯಾಧುನಿಕ ಸಿ.ಸಿ.ಕ್ಯಾಮರಾ ಅಳವಡಿಕೆ, ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್ ಬೇರೆಡೆಗೆ ಸ್ಥಳಾಂತರಗೊಳಿಸಿ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವುದೂ ಸೇರಿದಂತೆ ೧೪ ಪ್ರಮುಖ ಬೇಡಿಕೆಗಳ ಮನವಿಯನ್ನು ಕಾಲೇಜಿನ ಪರವಾಗಿ ಅರ್ಪಿಸಿದರು.
ಖ್ಯಾತ ಹಾಸ್ಯಕಲಾವಿದರಾದ ಮಿಮಿಕ್ರಿ ದಯಾನಂದ ಮತ್ತು ಪ್ರವೀಣಕೆಂಪೇಗೌಡರಿಂದ ಹಾಸ್ಯ ರಸಾಯನ ಗಮನಸೆಳೆಯಿತು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.ಸೋಮಶೇಖರ್ ಸ್ವಾಗತಿಸಿ, ಉಪನ್ಯಾಸಕ ಸತೀಶ್ ವಂದಿಸಿದರು. ವಿದ್ಯಾರ್ಥಿಗಳಾದ ಶಾರದಾಹಿರೇಮಠ ಪ್ರಾರ್ಥಿಸಿದ್ದು, ಭಾವನಾ ಮತ್ತು ನೈದಿಲೆ ನಿರೂಪಿಸಿದರು. ಮಲ್ಲಿಗೆಸುಧೀರ್ ಮತ್ತು ಮಂಜುಳಾ ತಂಡದವರಿಂದ ಗೀತಗಾಯನ ನಡೆಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ರ್ಯಾಂಕ್ ವಿಜೇತರು, ಪಿಎಚ್ಡಿ-ಅತಿಹೆಚ್ಚು ಅಂಕ ಪಡೆದವರು ಜೊತೆಗೆ ಅಗ್ನಿಪಥ್ಗೆ ಆಯ್ಕೆಯಾದ ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿಗಳನ್ನು ಪ್ರಾಂಶುಪಾಲೆ ಚಾಂದಿನಿ ಸನ್ಮಾನಿಸಿದರು.
IDSG Govt College