ಚಿಕ್ಕಮಗಳೂರು: ಜಿಂಕೆಯನ್ನು ಶಿಕಾರಿಯಾಡಿ ಬಾಡೂಟಕ್ಕೆ ತಯಾರಿ ಮಾಡುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಭದ್ರ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಅರಣ್ಯ ಅಂಚಿನಡಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕು ಹುಲ್ಲುವತ್ತಿ ಗ್ರಾಮದ ಸಮೀಪದ ಸಂಗಮ ಕಾಫಿ ತೋಟದಲ್ಲಿ ಬೃಹತ್ ಗಾತ್ರದ ಜಿಂಕೆ ಬೇಟೆಯಾಡಿ ಪಾರ್ಟಿ ಮಾಡುತ್ತಿದ್ದಾಗ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ಕಾಫಿ ತೋಟಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಿಂಕೆ ಶಿಕಾರಿ ಮಾಡಿ ದ್ದು, ಅಲ್ಲೇ ಬಾಡೂಟ ತಯಾರಿ ಮಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಜೊತೆಗೆ ೮ ಕೆ.ಜಿ. ಜಿಂಕೆ ಮಾಂಸ ಹಾಗೂ ನಾಡ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ೨೫ ಕೆ.ಜಿ. ತೂಕದ ಜಿಂಕೆಯನ್ನು ಶಿಕಾರಿ ಮಾಡಿರುವ ಆರೋಪವನ್ನು ಆರೋಪಿಗಳು ಎದುರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಕಳ್ಳ ಬೇಟೆ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
Deer hunting under Muthodi forest edge