ಚಿಕ್ಕಮಗಳೂರು: : ರಂಭಾಪುರಿ ಪೀಠ-(ಬಾಳೆಹೊನ್ನೂರು) ಧರ್ಮದಿಂದ ನಡೆದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಹಣ ನೋಡಿ ಕೊಡುವ ಬೆಲೆ ಆಸ್ತಿ ನೋಡಿ ಒಂದಾಗುವ ಬಂಧುಗಳು ಹೆಚ್ಚು ಕಾಲ ನಮ್ಮೊಂದಿಗೆ ಉಳಿಯುವುದಿಲ್ಲ. ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ನಾಗರ ಪಂಚಮಿಯಂದು ನಾಗರಕಟ್ಟೆಗೆ ಹಾಲೆರೆದು ಶ್ರಾವಣ ಸಂಜೆ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಪ್ರದಾಯ ಪರಂಪರೆಗಳು ಮಾನವನ ಶ್ರೇಯಸ್ಸಿಗಾಗಿ ಇವೆ ಹೊರತು ಅವನತಿಗಲ್ಲ. ಪ್ರಾಚೀನ ಆದರ್ಶ ಚಿಂತನಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಜೀವನದಲ್ಲಿ ಶಾಂತಿ ನೆಲೆಸಲು ಸಾಧ್ಯ. ಬದುಕು ಬದಲಾಯಿಸಬೇಕು ಎಂದುಕೊಂಡಿದ್ದರೆ ಅದಕ್ಕಾಗಿ ಹಣ ಬೇಡ. ಯೋಜನೆ ಬದಲಾದರೆ ಸಾಕು. ಭಗವಂತನ ಕೈಯಲ್ಲಿ ಎಲ್ಲಾ ಇರುತ್ತದೆ. ಆದರೂ ಸುಮ್ಮನಿರುತ್ತಾನೆ. ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಆದರೂ ಎಲ್ಲವೂ ಇದೆ ಅನ್ನುವ ಭ್ರಮೆಯಲ್ಲಿರುತ್ತಾನೆ. ಬೆಳಕನ್ನು ಕಾಣಲು ಇಡೀ ರಾತ್ರಿ ಕಾಯಬೇಕು. ಸಂತೋಷವನ್ನು ಕಾಣಲು ಕಷ್ಟಗಳನ್ನು ಎದುರಿಸಲೇಬೇಕಾಗುತ್ತದೆ. ಮನುಷ್ಯ ಆಸೆಗಳಿಗಾಗಿ ಬದುಕಬಾರದು. ಆದರ್ಶಕ್ಕಾಗಿ ಬದುಕಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ದೀರ್ಘವಾದ ಜೀವನವಷ್ಟೇ ಮುಖ್ಯವಲ್ಲ. ದಿವ್ಯವಾದ ಜೀವನ ಮುಖ್ಯವೆಂದರು.
ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ತಿಂದ ಅನ್ನ ಶಾಶ್ವತವಾಗಿ ಯಾರ ಹೊಟ್ಟೆಯಲ್ಲಿ ಇರುವುದಿಲ್ಲ. ಆದರೆ ಹಸಿವು ನೀಗಿಸಿದ ಆ ಘಳಿಗೆಯನ್ನು ಅರಿತವರು ಎಂದೂ ಮರೆಯಲಾರರು. ಹಿಂದೆ ಜನರ ಬಟ್ಟೆ ಕೊಳೆಯಾಗಿರುತ್ತಿದ್ದರೂ ಮನಸ್ಸು ಸ್ವಚ್ಛವಾಗಿತ್ತು. ಆದರೆ ಈಗ ಬಟ್ಟೆಗಳು ಸ್ವಚ್ಛವಾಗಿವೆ ಆದರೆ ಮನಸ್ಸು ಕೊಳೆಯಾಗಿವೆ. ಆತ್ಮ ಸಾಕ್ಷಿಗೆ ಅನುಗುಣವಾಗಿ ನಾವಿದ್ದರೆ ಯಾರ ಮುಂದೆ ತಲೆ ತಗ್ಗಿಸುವ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ಸತ್ಕ್ರಾಂತಿಯ ಮೂಲಕ ಜನ ಸಮುದಾಯವನ್ನು ಉದ್ಧರಿಸಿದ್ದಾರೆ ಎಂದರು. ರಾಯಚೂರು ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸತ್ಕಥಾ ಶ್ರವಣ ಮಾಡುವುದೇ ನಿಜವಾದ ಶ್ರಾವಣ. ಒಳ್ಳೆಯದನ್ನು ಕೇಳಿ ಅದೇ ದಾರಿಯಲ್ಲಿ ಮುನ್ನಡೆವ ಪ್ರಯತ್ನ ಮಾಡಬೇಕೆಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಮತ್ತು ಸ್ವಾಗತ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತ ಸಮುದಾಯದ ಸಮ್ಮುಖದಲ್ಲಿ ನಾಗರಕಟ್ಟೆಗೆ ಹಾಲೆರೆದು ಸಾಂಪ್ರದಾಯಕ ಪೂಜೆ ಸಲ್ಲಿಸಿದರು.
Shri Rambhapuri Dr. Veerasomeshwara Jagadguru