ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯಲು ಬಿಟ್ಟು ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಂದು ಬೆಳಗ್ಗೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ ನೇತೃತ್ವದಲ್ಲಿ ಅಜಾದ್ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋ?ಣೆ ಕೂಗಿ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಪಿ.ಸಿರಾಜೇಗೌಡ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು ಬೆಳೆ ಬೆಳೆಯಲು ಸರಿಯಾಗಿ ನೀರಿಲ್ಲದ ಪರಿಸ್ಥಿತಿ ಇರುವಾಗ ಕಾವೇರಿ ಕೊಳ್ಳದಲ್ಲಿ ೧೨೨ ಟಿಎಂಸಿ ಸಂಗ್ರಹವಾಗಬೇಕಿದ್ದು, ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಈಗ ಕೇವಲ ೫೦ ಟಿಎಂಸಿ ನೀರಿದೆ, ಅದನ್ನು ತಮಿಳುನಾಡಿಗೆ ಹರಿಯ ಬಿಟ್ಟಿರುವುದನ್ನು ಖಂಡಿಸಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ವ್ಯಕ್ತಿಗಳನ್ನು ಓಲೈಕೆ ಮಾಡಿಕೊಳ್ಳಲು ಮುಂದಾಗಿರುವುದನ್ನು ಕೈಬಿಟ್ಟು ಕೂಡಲೇ ಜನಪರ ರೈತ ಪರ ಆಡಳಿತಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು. ರಾಜ್ಯದ ಜನತೆ ಸೌಮ್ಯ ಸ್ವಭಾವವನ್ನು ಹೊಂದಿದ್ದು ತಾರತಮ್ಯ ನೀತಿ ಅನುಸರಿಸದೇ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಇದನ್ನು ಬಿಟ್ಟು ತಮ್ಮ ವರ್ತನೆ ಬದಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದರ ಜೊತೆಗೆ ಜಿಲ್ಲಾ ಸಚಿವರಿಗೆ ಮಸಿ ಬಳಿಯುವುದಾಗಿ ಎಚ್ಚರಿಸಿದರು.
ಕನ್ನಡ ಸೇನೆ ಜಿಲ್ಲಾ ವಕ್ತಾರ ಕಳವಾಸೆ ರವಿ ಮಾತನಾಡಿ ಕನ್ನಡ ನಾಡಿನ ನುಡಿ ಸಂಸ್ಕೃತಿ, ನೆಲ, ಜಲ, ರಕ್ಷಣೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕೆಂದು ಒತಾಯಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ವಿವಿಧ ಘಟಕಗಳ ಮುಖಂಡರುಗಳಾದ ಜಯಪ್ರಕಾಶ್, ಸತೀಶ್, ಶಂಕರೇಗೌಡ, ದೇವರಾಜ್, ಯೋಗೀಶ್, ವಿನಯ್, ಟೋನಿ, ಮಂಜು, ಅಶೋಕ್ ಮತ್ತಿತರರು ಭಾಗವಹಿಸಿದ್ದರು.
Kannada army protests against Cauvery water injustice to Tamil Nadu