ಚಿಕ್ಕಮಗಳೂರು: ಸರ್ಕಾರದ ಅನುದಾನದಲ್ಲಿ ನಡೆಯುವ ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಕಳಪೆಯಾಗಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಶಾಸಕ ಹೆಚ್.ಡಿ ತಮ್ಮಯ್ಯ ಎಚ್ಚರಿಸಿದರು.
ಅವರು ಇಂದು ಕಲ್ಯಾಣನಗರದ ಗ್ರಾಮಾಂತರ ಠಾಣೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಮತ್ತು ಸುಭಾ?ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಕ್ರೀಡಾ ಇಲಾಖೆ ಹಾಗೂ ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಗಮನಕ್ಕೆ ತಂದಿದ್ದು ಕಾಮಗಾರಿ ಸ್ಥಗಿತವಾಗಿದ್ದು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆಂದು ಹೇಳಿದರು.
ಈ ಸಂಬಂಧ ಯುವ ಜನ ಸೇವಾ ಕ್ರೀಡಾ ಇಲಾಖೆ ಮತ್ತು ಪಿ.ಡಬ್ಲ್ಯೂ.ಡಿ ಇಲಾಖೆ ಸಿಬ್ಬಂದಿಗಳೊಂದಿಗೆ ಶತಮಾನೋತ್ಸವ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದು ಒಳಾಂಗಣ ಕ್ರೀಡಾಂಗಣ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ ಅನುದಾನದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಕ್ರೀಡಾಪಟುಗಳಿಗೆ ತೊಂದರೆ ಆಗದಂತೆ ಕ್ರೀಡಾಂಗಣದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕೆಂದು ಸೂಚನೆ ನೀಡಿದ ಅವರು ಸಿಂಡರ್ ಟ್ರ್ಯಾಕ್ ಕಾಮಗಾರಿಯನ್ನು ಗುತ್ತಿಗೆದಾರ ಅರ್ಧಕ್ಕೆ ಕೈಬಿಟ್ಟಿರುವುದರಿಂದ ಪರ್ಯಾಯ ಗುತ್ತಿಗೆದಾರರಿಗೆ ಅವಕಾಶ ನೀಡಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
೪೫೦ ಲಕ್ಷ ರೂ. ವೆಚ್ಚದಲ್ಲಿ ಫುಟ್ಬಾಲ್ ಕೋರ್ಟ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಸಧ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದ ತಮ್ಮಯ್ಯ ಸರ್ಕಾರ ೫ ಗ್ಯಾರಂಟಿಗಳ ಪೈಕಿ ಮೂರನ್ನು ಜಾರಿ ಮಾಡಿ ಅನು?ನಕ್ಕೆ ತಂದಿದ್ದು ಆ.೩೦ ರಂದು ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷದವರು ಅಪಪ್ರಚಾರ ನಡೆಸುತ್ತಿದ್ದಾರೆ ಆದರೆ ಕಾಮಗಾರಿ ಮುಂದುವರಿಯುತ್ತದೆ ಈಗ ಟೆಂಡರ್ ಆದ ಕಾಮಗಾರಿಗಳಿಗೂ ಚಾಲನೆ ನೀಡಲಿದೆ ಇನ್ನೊಂದು ತಿಂಗಳಲ್ಲಿ ಕ್ರೀಡಾ ಸಚಿವರನ್ನು ಕರೆಸಿ ಕ್ರೀಡಾಂಗಣದ ಉದ್ಘಾಟನೆ ಅತಿ ಶೀಘ್ರವಾಗಿ ನೆರವೇರಿಸಿ ಕ್ರೀಡಾಪಟುಗಳಿಗೆ ನೀಡುವುದಾಗಿ ಭರವಸೆ ನೀಡಿದರು.
ಅಯ್ಯನ ಕೆರೆಯಲ್ಲಿ ಬೋಟಿಂಗ್ ವಿಹಾರ ನಡೆಸುವುದರಿಂದ ನೀರು ಕಲುಷಿತವಾಗುತ್ತದೆ ಎಂದು ಕೆರೆ ಅಚ್ಚು ಕಟ್ಟುದಾರರು ದೂರು ನೀಡಿದ್ದು ಈ ಬಗ್ಗೆ ಅಧಿಕಾರಿಗಳು ಮತ್ತು ಕೆರೆ ಅಚ್ಚುಕಟ್ಟುದಾರರ ಸಭೆ ನಡೆಸಿ ಈ ಕೆರೆ ನೀರನ್ನು ಬಳಸುವಲ್ಲಿ ಧಾರ್ಮಿಕವಾಗಿ, ಭಾವನಾತ್ಮಕವಾಗಿ ಸಂಬಂಧ ಇದ್ದು ವಿದ್ಯುತ್ ಚಾಲಿತ ಬೋಟ್ ವ್ಯವಸ್ಥೆಗೆ ಸೂಚನೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ಮಂಜುಳಾಹುಲ್ಲಳ್ಳಿ, ಪಿಡಬ್ಲೂಡಿ, ಎಇಇ, ಗವಿರಂಗಪ್ಪ, ನಗರಸಭೆ ಆಯುಕ್ತ ಬಸವರಾಜ್ ಉಪಸ್ಥಿತರಿದ್ದರು.
Inspection of indoor stadium work