ಚಿಕ್ಕಮಗಳೂರು: ರಾಜ್ಯಾದ್ಯಂತ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ರಾಜಿ ಸಂಧಾನದ ಮೂಲಕ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಭಾಗೌಡರ್ ಹೇಳಿದರು.
ಈ ಕುರಿತಂತೆ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾರ್ವಜನಿಕರು ನ್ಯಾಯಾಲಯಗಳಲ್ಲಿ ವಿಚಾರಣ ಹಂತದಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್ಎಂಎಸ್, ವಾಟ್ಸ್ ಆಪ್, ಎಲೆಕ್ಟ್ರಾನಿಕ್ ಮೋಡ್ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಅದಾಲತ್ನಲ್ಲಿ ಉಭಯ ಪಕ್ಷಗಾರರಿಗೆ ರಾಜಿ ಮಾಡಿಕೊಳ್ಳುವುದಕ್ಕೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಿಕೊಡಲಾಗುವುದು, ಉಭಯ ಪಕ್ಷದವರಿಗೆ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧ್ಯವ ಉಳಿದು ವಿವಾದ ತೀರ್ಮಾನವಾಗಲಿದೆ.
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆ ಆದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್, ಹಣ ವಸೂಲಾತಿ, ಮೋಟಾರು ಅಪಘಾತ ಪರಿಹಾರ, ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಂಗಳು, ಗಣಿ ಮತ್ತು ಖನಿಜಗಳು, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಗದ ಹಕ್ಕುಗಳು, ನಿರ್ಬಂಧಕಾಜ್ಞೆ ಮೊಕದ್ದಮೆಗಳು) ಇತರೆ ಕ್ರಿಮಿನಲ್ ಪ್ರಕರಣಗಳು (ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಪ್ರಕರಣಗಳು) ಸೇರಿದಂತೆ ೨೦೨೩ರ ಆಗಸ್ಟ್ ೦೧ ರವರೆಗೆ ೩೨,೭೩೩ ಪ್ರಕರಣಗಳು ಬಾಕಿಯಿದೆ ಎಂದರು.
೨೦೨೩ರ ಆಗಸ್ಟ್ ೨೨ ರಂದು ರಾಜಿ ಸಂಧಾನಕ್ಕಾಗಿ ೧೨,೨೧೧ ಪ್ರಕರಣಗಳನ್ನು ಗುರುತಿಸಿಲಾಗಿದ್ದು, ಇವುಗಳಲ್ಲಿ ೪,೧೪೪ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಸಾರ್ವಜನಿಕರು ಸೆಪ್ಟೆಂಬರ್ ೦೯ ರ ಲೋಕ ಅದಾಲತ್ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿದರು.
Rashtriya Lok Adalat on September 9 across the state