ಚಿಕ್ಕಮಗಳೂರು: ರಂಭಾಪುರಿ ಪೀಠ-(ಬಾಳೆಹೊನ್ನೂರು) ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆ. ಆದ್ದರಿಂದ ಮಾಡುವ ಕಾರ್ಯದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ನಿಶ್ಚಿತ ಪ್ರಾಪ್ತವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿದೇವ ಜಗದ್ಗುರುಗಳವರ ಲಿಂಗಾಂಗ ಸಾಮರಸ್ಯದ ೩೧ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ತಿಳಿದು ಬರುವುದು ಜನನ. ತಿಳಿಯದೇ ಬರುವುದು ಮರಣ. ಆದರೆ ಎಲ್ಲವನ್ನು ತಿಳಿದು ಬದುಕುವುದೇ ಜೀವನ. ಒಳ್ಳೆಯ ಯೋಚನೆಗಳು ಯಾವಾಗಲೂ ಒಳ್ಳೇ ಫಲಿತಾಂಶಗಳನ್ನು ಕೊಡುತ್ತವೆ. ದುಡಿಮೆಯಲ್ಲಿ ಕ್ರಮ ನಿಯಮ ಗುರಿ ಸದ್ಭಾವನೆ ವಿವೇಚನೆ ಇರಬೇಕಾಗುತ್ತದೆ. ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲುವಂತೆ ಮನಸ್ಸು ಎಷ್ಟೇ ಭಾರವಾದರೂ ಬದುಕಿನ ಜೊತೆ ಸಾಗಲೇಬೇಕು.
ಕಲಿತ ಅಕ್ಷರ, ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪತ್ತು, ಇಷ್ಟಪಟ್ಟು ಮಾಡುವ ದೈವಭಕ್ತಿ ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲವೆಂಬ ಆತ್ಮ ವಿಶ್ವಾಸವನ್ನು ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ಹೊಂದಿ ಬದುಕಿನುದ್ದಕ್ಕೂ ಸತ್ಕಾರ್ಯಗಳನ್ನು ಮಾಡಿದ್ದನ್ನು ಮರೆಯಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ಜೀವನ ಮೌಲ್ಯಗಳನ್ನು ಪರಿಪಾಲಿಸಿ ಭಕ್ತ ಸಂಕುಲದ ಬಾಳಿಗೆ ಸಂಜೀವಿನಿಯಾಗಿದ್ದರು. ಅವರ ಆದರ್ಶಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕನಸು ನನಸಾಗಲು ಪ್ರಯತ್ನ ಮುಖ್ಯ. ಸಾಧನೆಯ ಹಿಂದೆ ತ್ಯಾಗ ಪರಿಶ್ರಮ ಇರುತ್ತದೆ. ಎಣ್ಣೆ ಇರುವತನಕ ದೀಪ ಬೆಳಗಬಹುದು. ಆದರೆ ಜ್ಞಾನದಿಂದ ಸದಾ ಬೆಳಗಿದ ಕೀರ್ತಿ ಲಿಂ.ಶ್ರೀ ರುದ್ರಮುನಿ ಜಗದ್ಗುರುವರ್ಯರಿಗೆ ಸಲ್ಲುತ್ತದೆ ಎಂದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಸಂಸ್ಕಾರ ಮತ್ತು ಶಿಕ್ಷಣಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದರು.
ಆಹಾರದಲ್ಲಿ ಭಕ್ತಿ ಬೆರೆಸಿದರೆ ಪ್ರಸಾದವಾಗುತ್ತದೆ. ನೀರಿನಲ್ಲಿ ಭಕ್ತಿ ಬೆರೆಸಿದರೆ ತೀರ್ಥವಾಗುತ್ತದೆ. ಧರ್ಮದಲ್ಲಿ ನಿಷ್ಠೆಯಿದ್ದರೆ ಬಾಳು ಉಜ್ವಲಗೊಳ್ಳುವುದು. ಲಿಂ.ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಕ್ರಿಯಾಶೀಲ ಬದುಕು ಧರ್ಮಕ್ಕೆ ಮತ್ತು ಸಮಾಜಕ್ಕೆ ಬಹು ದೊಡ್ಡ ಶಕ್ತಿಯಾಗಿತ್ತು ಎಂದರು.
ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಲೀಲಾಮೃತ ಪ್ರವಚನ ಮಾಡಿ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಜನ ಹಿತಾತ್ಮಕ ಮತ್ತು ರಚನಾತ್ಮಕ ಕಾರ್ಯಗಳನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು, ಕಲಾದಗಿ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು.
ಈ ಅಪೂರ್ವ ಸಮಾರಂಭದಲ್ಲಿ ಆಲ್ದೂರು ಹೋಬಳಿ ವೀರಶೈವ ಲಿಂಗಾಯತ ಸಮಾಜದ ಗೌರವ ಅಧ್ಯಕ್ಷ ಇ.ಸಿ.ಉಮೇಶ, ಅಧ್ಯಕ್ಷ ಕೆ.ಎಸ್.ಮಹೇಶ, ಉಪಾಧ್ಯಕ್ಷ ಇ.ಸಿ.ಕುಮಾರ, ಕಾರ್ಯದರ್ಶಿ ವೈ.ಸಿ.ಹರೀಶ, ಯು.ಜಿ.ರಾಜೇಶ, ಬಿ.ಎಸ್.ರಾಜೀವ, ಬಿ.ಎಸ್.ಮಂಜುನಾಥ, ಎ.ಎಸ್.ಪ್ರಶಾಂತ, ಬಸವರಾಜ ಬಿ.ಆರ್., ನಂದೀಶ, ಉಮೇಶ, ವಸಂತೇಗೌಡ, ಶಂಕರೇಗೌಡ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಆಲ್ದೂರು ಹೋಬಳಿ ವೀರಶೈವ ಸಮಾಜ ಬಾಂಧವರಿಂದ ಅನ್ನ ದಾಸೋಹ ಜರುಗಿತು.
ಪ್ರಾತ:ಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ಮತ್ತು ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಗದ್ದುಗೆಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಲ ಜರುಗಿತು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಿಂದ ಲಿಂಗೈಕ್ಯ ಶ್ರೀ ರುದ್ರಮುನಿ ಜಗದ್ಗುರುಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
Rambhapuri Virudramunideva Jagadguru’s 31st Punya Commemoration of Gender Harmony