ಚಿಕ್ಕಮಗಳೂರು: ದಿವ್ಯಾಂಗ ಚೇತನರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಮತ್ತು ಹೆಚ್.ಎಂ.ಟಿ. ಲಿಮಿಟೆಡ್ (ಭಾರತ ಸರ್ಕಾರದ ಉದ್ಯಮ) ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಶುಕ್ರವಾರ ನಡೆದ ದಿವ್ಯಾಂಗ ವ್ಯಕ್ತಿಗಳಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಹುಟ್ಟುವಾಗ ತಾನು ಹೀಗೇ ಹುಟ್ಟ ಬೇಕೆಂದು ಬಯಸಿರುವುದಿಲ್ಲ. ಕೆಲವರು ದಿವ್ಯಾಂಗ ಚೇತನರಾಗಿ ಜನಿಸುತ್ತಾರೆ. ಅದು ಅವರ ತಪ್ಪಲ್ಲ ಅಥವಾ ಅವರು ಅದನ್ನು ಬಯಸಿರುವುದೂ ಇಲ್ಲ ಎಂದ ಅವರು. ಅಂತಹ ವ್ಯಕ್ತಿಗಳಿಗೆ ಸಂಘ ಸಂಸ್ಥೆಗಳು ಮತ್ತು ನಾಗರೀಕರು ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
ದಿವ್ಯಾಂಗ ಚೇತನರು ಜೀವನದಲ್ಲಿ ಉತ್ಸಾಹ ಕಳೆದು ಕೊಳ್ಳದಂತೆ ಪೋಷಕರು ಮತ್ತು ಸಾರ್ವಜನಿಕರು ನೋಡಿಕೊಳ್ಳಬೇಕು. ಅವರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕು. ಪ್ರೋತ್ಸಾಹ ನೀಡಬೇಕು. ಅವರು ಎಲ್ಲಾರಂತೆ ಬದುಕಲು ಸಹಾಯ ಮಾಡಬೇಕು ಎಂದು ತಿಳಿಸಿದರು.
ದಿವ್ಯಾಂಗ ಚೇತನರಿಗೆ ನೀಡಲಾಗುತ್ತಿರುವ ಮಾಸಾಶನದ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದಾಗಿ ಭರವಸೆ ನೀಡಿದ ಅವರು ಸಿಎಸ್ಆರ್ ಫಂಡ್ನಿಂದ ೧೫ ಲಕ್ಷ ರೂ ಗಳ ಸಾಧನಗಳನ್ನು ದಿವ್ಯಾಂಗ ಚೇತನರಿಗೆ ನೀಡುವ ಮೂಲಕ ಹೆಚ್ಎಂಟಿ ಕಂಪನಿ ಅತ್ಯಂತ ಶ್ರೇಷ್ಠವಾದ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷ ಅಮೃತೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಚಿಕ್ಕಮಗಳೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ,ಸಿಡಿಪಿಒ ಚರಣ್ ರಾಜ್ ವಿಕಲಚೇತನರ ಅಧಿಕಾರಿ ಪೃಥ್ವಿರಾಜ್ ಮುಂತಾದವರು ಉಪಸ್ಥಿತರಿದ್ದರು.
Free Equipment Distribution Program for Disabled Persons