ಚಿಕ್ಕಮಗಳೂರು: ಅಪ್ರತಿಮ ದೇಶಭಕ್ತ ನಾ.ಸು.ಹರ್ಡೀಕರ್ ಅವರ ಆದರ್ಶ ಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು.
ನಗರದ ಭಾರತ ಸೇವಾದಳದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಅವರ ಪುಣ್ಯಸಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ನಾ.ಸು.ಹರ್ಡೀಕರ್ ಅಪ್ರತಿಮ ದೇಶಭಕ್ತರಾಗಿದ್ದರು. ಅವರು ಭಾರತ ಸೇವಾದಳವನ್ನು ಸ್ಥಾಪಿಸಿ ಅದರ ಮೂಲಕ ಲಕ್ಷಾಂತರ ರಾಷ್ಟ್ರಭಕ್ತರನ್ನು ತಯಾರುಗೊಳಿಸಿ ಸ್ವಾತಂತ್ರ ಚಳುವಳಿಗೆ ನೀಡಿದ್ದರಿಂದಾಗಿ ದೇಶ ಸ್ವಾತಂತ್ರ್ಯ ಗಳಿಸಲು ಸುಲಭವಾಯಿತು ಎಂದರು.
ಇಂದಿನ ಪೀಳಿಗೆಯ ಜನ ನಾ.ಸು.ಹರ್ಡೀಕರ್ ಅವರ ಜೀವನ ಚರಿತ್ರೆಯನ್ನು ಓದ ಬೇಕು. ಅವರಂತೆ ಶಿಸ್ತು, ರಾಷ್ಟ್ರಭಕ್ತಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ನಾ.ಸು.ಹರ್ಡೀಕರ್ ಅವರಂತಹ ದೇಶಭಕ್ತರನ್ನು ಇಂದಿನ ಪೀಳಿಗೆ ಸ್ಮರಿಸಬೇಕು. ಅವರು ಹಾಕಿಕೊಟ್ಟಿರುವ ಹಾದಿಯಲ್ಲೇ ಸಾಗಬೇಕು ಎಂದರು.
ಪುಣ್ಯಸ್ಮರಣೆ ಅಂಗವಾಗಿ ನಾ.ಸು.ಹರ್ಡೀಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ, ತಾಲೂಕು ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ಆರ್. ಜಗದೀಶ್, ಜಯಣ್ಣ, ಸೇವಾದಳ ಶಿಕ್ಷಕಿ ಮೀನಾಕ್ಷಿ ಉಪಸ್ಥಿತರಿದ್ದರು.
Commemoration program of Seva Dal founder N.S.Hardeekar