ಚಿಕ್ಕಮಗಳೂರು: ವರ್ತಮಾನದ ತಲ್ಲಣಗಳಿಗೆ ಮುಕ್ತಿ ದೊರಕಬೇಕಾ ದರೆ, ಭಗವಾನ್ ಬುದ್ಧ ಹೇಳಿದಂತೆ ನಾವು ಮತ್ತು ಶೂದ್ರ ಸಮುದಾಯದ ಜನ ನಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಬೇಕು ಎಂದು ಸಾಹಿತಿ ಡಾ. ನಟರಾಜ್ ಬೂದಾಳ್ ಸಲಹೆ ಮಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕ್ಯಾತನ ಬೀಡು ಪ್ರತಿಷ್ಠಾನ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವರ್ತಮಾನದ ತಲ್ಲಣಗಳಿಗೆ ಬುದ್ಧ ಬಸವ ಮಾರ್ಗ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬುದ್ಧ ಮತ್ತು ಬಸವ ಹೇಳಿದ್ದು, ಎಲ್ಲ ತಲ್ಲಣಗಳ ಮುಕ್ತಿಗೂ ನಿಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಿ ಆಗ ನಿಮಗೆ ನಡೆಯುವ ದಾರಿ ಕಾಣುತ್ತದೆ ಎಂದು ನಾವು ಅದನ್ನು ಹಚ್ಚಿಕೊಳ್ಳದಿದ್ದರೆ. ಈ ತಲ್ಲಣಗಳಿಗೆ ಬುದ್ಧನಾಗಲಿ ಅಥವಾ ಬಸವನಾಗಲಿ ಮುಕ್ತಿ ಕೊಡಲಾಗುವುದಿಲ್ಲ, ನಾವು ನಮ್ಮೊಳಗಿನ ದೀಪವನ್ನು ಹಚ್ಚಿಕೊಳ್ಳದಿದ್ದರೆ ಹೀಗೆ ತಲ್ಲಣಿಸುತ್ತಲೇ ಇರಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ನಾವು ನಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಲಾರದ ಪರಿಸ್ಥಿತಿ ಮತ್ತು ಒತ್ತಡದಲ್ಲಿದ್ದೇವೆ. ಆದರೂ, ಹೊಸ ಪೀಳಿಗೆಯವರಾದರೂ ಹಚ್ಚಿಕೊಳ್ಳ ಬಹುದು ಎಂಬ ಆಶಾ ಭಾವನೆ ತಮ್ಮಲ್ಲಿದೆ ಎಂದರು.
ಭಾರತೀಯರು ಬಹಳ ಸುಖ, ಸಂತೋಷ ಮತ್ತು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದು ಪ್ರಪಂಚದ ಎದುರು ಬಿಂಬಿಸಲಾಗುತ್ತಿದೆ. ಆದರೆ, ಇಲ್ಲಿ ನೋಡಿದರೆ ನಮ್ಮ ಬಾಳು ಇಷ್ಟೊಂದು ಆತಂಕದಲ್ಲಿ, ತಲ್ಲಣದಲ್ಲಿ ಒದ್ದಾಡುತ್ತಿದೆ. ತುಳಿಸಿಕೊಳ್ಳುತ್ತಿರುವ ನಾವು ಸಾವಿರಾರು ವರ್ಷಗಳಿಂದ ತುಳಿಸಿಕೊಳ್ಳುತ್ತಲೇ ಇದ್ದೇವೆ. ಅದೂ ಆನಂದದಿಂದ ತುಳಿಸಿಕೊಳ್ಳುತ್ತಿದ್ದೇವೆ.ಸ ಮೆಲ್ಲನೆ ನಾವು ನಮಗೆ ಅರಿವಿಲ್ಲದಂತೆ ಪ್ರಜಾಸತ್ತೆಯನ್ನು ಕಳೆದುಕೊಳ್ಳು ತ್ತಿದ್ದೇವೆ. ಅದರ, ಜೊತೆಗೆ ಸಾಂಸ್ಕೃತಿಕ ವಸಾಹತು ಶಾಹಿ ನಮ್ಮ ತಲೆಯ ಮೇಲೆ ಇಟ್ಟಿರುವ ಕಾಲನ್ನು ಇನ್ನೂ ತೆಗೆದಿಲ್ಲ. ಅದು ಒತ್ತುತ್ತಲೇ ಇದೆ ಎಂದರು
ಭಾರತಕ್ಕೆ ರಾಜಕೀಯವಾಗಿ ಮಾತ್ರ ಸ್ವಾತಂತ್ರ್ಯ ಲಭಿಸಿದೆ. ಆದರೆ, ಸಾಂಸ್ಕೃ ತಿಕವಾಗಿ ವಸಾಹತು ಶಾಹಿಯ ಅಡಿಯಲ್ಲಿ ನಾವು ಇನ್ನೂ ನಲುಗುತ್ತಲೇ ಇದ್ದೇವೆ ಎಂದು ವಿಷಾದಿಸಿದರು.
ಶೂದ್ರ ಸಮುದಾಯ ತಮ್ಮ ಬದುಕಿನ ಸಾಂಸ್ಕೃತಿಕ ಅಸ್ಮಿತೆಯನ್ನೇ ಗುರುತಿಸಿ ಕೊಂಡಿಲ್ಲ, ಅವರು, ಇನ್ನೂ ವೈದಿಕ ಆಚರಣೆಯಲ್ಲೇ ತೊಡಗಿದ್ದಾರೆ. ಹಾಗಾಗಿ ಅವರು ಇನ್ನೂ ಸ್ವತಂತ್ರರಾಗಿಲ್ಲ. ನಮ್ಮ ಮಕ್ಕಳಿಗೆ ನಾವೇ ಜಾತಿ ಯನ್ನು ಹೇಳಿಕೊಡುತ್ತಿದ್ದೇವೆ. ಬಸವಾದಿ ಶರಣರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗದೇ ಇನ್ನೂ ವೈದಿಕ ಆಚರಣೆಯಲ್ಲೇ ತೊಡಗಿರುವುದರಿಂದಾಗಿ ಇಷ್ಟೊಂದು ತಲ್ಲಣಗಳಿಂದ ಒದ್ದಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ನಟರಾಜ ಬೂದಾಳ್ ಅವರು ವರ್ತಮಾನದ ತಲ್ಲಣಗಳ ಕುರಿತು ಸಭಿಕರೊಂದಿಗೆ ಸಂವಾದ ನಡೆಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ವರ್ತಮಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕೃಷಿಕ ನಾಗೇನಹಳ್ಳಿ ಚಂದ್ರಣ್ಣ, ಸಾಹಿತಿ ಪ್ರದೀಪ್ ಕೆಂಜಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಂಗಮ ಪ್ರತಿಷ್ಠಾ ನದ ಎಂ.ಸಿ.ಶಿವಾನಂದಸ್ವಾಮಿ, ದಲಿತ ಮುಖಂಡರಾದ ಪಿ.ವೇರಾಯುಧನ್, ಉಮೇಶ್, ಉಪನ್ಯಾಸಕ ಎಚ್.ಎಂ.ಮಹೇಶ್, ಪತ್ರಕರ್ತ ಎನ್.ರಾಜು, ಆಪ್ತ ಸಮಾಲೋಚಕಿ ಮಮತಾ, ಮಹೇಶ್ಚಂದ್ರ, ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ ಸಂವಾದದಲ್ಲಿ ಪಾಲ್ಗೊಂಡಿದ್ದರು.
ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕ ವಿಜಯಕುಮಾರ್ ಉಪಸ್ಥಿತರಿದ್ದರು.
Dialogue on Buddha Basava’s Path to Present-day Anxieties