ಚಿಕ್ಕಮಗಳೂರು: ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾದದು, ಇಂತಹ ಸಹಕಾರಿ ತತ್ವಗಳ ಮೂಲಕ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಮಲ್ಲಂದೂರು ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದಿಂದ ಪ್ರಾರಂಭಗೊಂಡ ಈ-ಸ್ಟಾಂಪಿಂಗ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಸಂಘಗಳಲ್ಲಿ ಜನಪರವಾದ ಸಾಕಷ್ಟು ಯೋಜನೆಗಳಿವೆ, ಅವುಗಳ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಮಾತನಾಡಿ ಈ ಸಂಸ್ಥೆಗೆ ಜಿಲ್ಲೆಯಾದ್ಯಂತ ಇರುವ ಸಣ್ಣ ಸಣ್ಣ ಕೈಗಾರಿಕೆಗಳು ಮತ್ತಷ್ಟು ಸದಸ್ಯತ್ವ ಹೊಂದಿ ಈ ಸಂಸ್ಥೆಯು ಹೆಚ್ಚು ಹೆಚ್ಚು ಅಭಿವೃಧ್ಧಿಯಾಗಿ ಜಿಲ್ಲೆಯಲ್ಲೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಎಸ್.ಎಂ.ಎಸ್. ಅಧ್ಯಕ್ಷ ಸೂರಿಪ್ರಭು ಚಿಕ್ಕಮಗಳೂರು ಜಿಲ್ಲಾ ಕೈಗಾರಿಕಾ ಮತ್ತು ಮಾರಾಟ ಸಹಕಾರ ಸಂಘವು ಸರ್ಕಾರದ ಒಂದು ಅಂಗಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಜಿಲ್ಲೆಯಾದ್ಯಂತ ಸದಸ್ಯರುಗಳಿದ್ದು, ಈ ಸಂಸ್ಥೆಗೆ ೩೪ ವರ್ಷಗಳು ಸಂದಿದ್ದು, ಈ ಸಂಸ್ಥೆಯ ಉದ್ದೇಶ ಉತ್ತಮ ರೀತಿಯಲ್ಲಿ ಸಂಘದ ಸದಸ್ಯರ ಮೂಲಕ ಕಛೇರಿ ಹಾಗೂ ಸಂಘ ಸಂಸ್ಥೆಗಳಿಗೆ ಬೇಕಾಗಿರುವ ಪೀಠೋಪಕರಣಗಳು, ಲೇಖನ ಸಾಮಗ್ರಿ ಇನ್ನಿತರೆ ಯಾವುದೇ ವಸ್ತುಗಳನ್ನು ಈ ಸಂಸ್ಥೆಯ ಸರಬರಾಜು ಮಾಡಲಾಗುತ್ತಿದ್ದು, ಸಣ್ಣ ಸಣ್ಣ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಈ ಸಂಸ್ಥೆಯದ್ದಾಗಿರುತ್ತದೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಎನ್. ಚಂದ್ರಶೇಖರ್ ಹಾಗೂ ಡಿ.ಎಸ್.ಎಂ.ಎಸ್. ಮಾಜಿ ಅಧ್ಯಕ್ಷರುಗಳಾದ ಕನಕರಾಜ್, ಮಂಜುನಾಥ್ಜೋಷಿ, ಭಗವತಿ ಹರೀಶ್ ಹಾಗೂ ಉಪಾಧ್ಯಕ್ಷ ಅಶೋಕ್ ಕುಮಾರ್, ನಿರ್ದೇಶಕರಾದ ಚಂದ್ರಶೇಖರ್ ಎನ್. ತೇರದಾಳ್, ವೇಣುಗೋಪಾಲ್ ಪ್ರಭು ಮತ್ತು ವ್ಯವಸ್ಥಾಪಕರಾದ ಕುಮಾರಸ್ವಾಮಿ, ಲೆಕ್ಕಿಗರಾದ ಕಮಲಮ್ಮ ಹಾಗೂ ಸರ್ವ ಸದಸ್ಯರುಗಳು ಭಾಗವಹಿಸಿದ್ದರು.
District Industrial Supply and Sales Co-operative Society