ಚಿಕ್ಕಮಗಳೂರು: ರಾಜ್ಯ ಸರ್ಕಾರದ ೮ ಕೋಟಿಗೂ ಹೆಚ್ಚು ಅನುದಾನದಿಂದ ಕ್ಷೇತ್ರದ ವಿವಿಧೆಡೆ ರಸ್ತೆ, ಚರಂಡಿ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ರಾಜ್ಯ ಸರ್ಕಾರದ ಕೆಆರ್ಐಡಿಲ್ ಮತ್ತು ಎಂಎಡಿಬಿ ಅನುದಾನದಲ್ಲಿ ಇಂದು ತೋಗರಿಹಂಕಲ್ ಮತ್ತು ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಣ ಸೇತುವೆ ಆಶ್ರಯ ಬಡಾವಣೆ, ಕೋಬುಗತ್ತಿ ಮತ್ತು ಕಾಮೇನಹಳ್ಳಿ ಕ್ಷೇತ್ರದ ವಿವಿಧೆಡೆ ರಸ್ತೆ, ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗುತ್ತಿಗೆದಾರ ನಮ್ಮ ಅಣ್ಣ, ತಮ್ಮ, ಪಕ್ಷದವರು ಯಾರೇ ಆಗಲಿ ಅವರಿಂದ ಗುಣ ಮಟ್ಟದ ಕಾಮಗಾರಿಯನ್ನು ಮಾಡಿಸಬೇಕು. ಗುಣಮಟ್ಟದ ಕಾಮಗಾರಿ ಇದ್ದರೆ ಅನುದಾನ ತಂದಿದ್ದಕ್ಕೂ ಸಾರ್ಥಕವಾಗುತ್ತದೆ. ಕೆಲಸ ಕಳಪೆ ಇರುವುದು ಗೊತ್ತಾದ ಕೂಡಲೇ ಜನರು ನಮ್ಮ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಮುಂದೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಈ ಭಾಗದ ವಿದ್ಯುತ್ ಸಮಸ್ಯೆ ಸ್ವಲ್ಪ ಕಡಿಮೆ ಆಗಿದೆ. ಬಯಲು ಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ. ಆ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು, ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ೧೦೦ ದಿನದಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಿಸಲಾಗಿದ್ದ ೫ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಡೀ ದೇಶದಲ್ಲೇ ಯಾರೂ ಘೋಷಿಸದಂತಹ ಕಾರ್ಯಕ್ರಮಗಳಿವು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ೨೦೦೦ ರೂ. ನಗದು ವರ್ಗಾವಣೆಯ ಗೃಹಲಕ್ಷ್ಮಿ, ೨೦೦ ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೀತಿ ಹಾಗೂ ಅನ್ನ ಭಾಗ್ಯದಲ್ಲಿ ಪಡಿತರ ಮತ್ತು ಪ್ರತಿ ವ್ಯಕ್ತಿಗೆ ೧೭೫ ರೂ. ಹಣ ಹೀಗೆ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಇಂತಹ ಸರ್ಕಾರ ಯಾವುದಾದರೂ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಮಾತ್ರ ಎಂದರು.
ಈ ಗ್ಯಾರಂಟಿಗಳನ್ನು ಜಾರಿಗೆ ತರುವ ವೇಳೆ ಬಿಜೆಪಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿಯಿಲ್ಲ. ಈ ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಕೂಗು ಹಾಕಿದ್ದರು. ಆದರೆ ಬಡವರು, ಅಲ್ಪಸಂಖ್ಯಾತರು, ಹಿಂದುಳಿದವರ, ಶೋಷಿತ ವರ್ಗದವರಿಗೆ ಈ ಯೋಜನೆಗಳನ್ನು ಕೊಟ್ಟು, ಬದುಕಿಗೆ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.
ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಡವರ ಕಣ್ಣೀರು ಒರೆಸುವ ತಾಯಿ ಕರುಳು ಇದೆ. ಕೇಂದ್ರದಲ್ಲಿರುವವರು ಅದಾನಿ, ಅಂಬಾನಿಯಂತಹ ಐದಾರು ಜನರಿಗೆ ಲಕ್ಷ ಕೋಟಿ ಮನ್ನಾ ಮಾಡುತ್ತಾರೆ. ಅಂತಹ ಐದಾರು ಜನರ ಬಗ್ಗೆ ಮಾತ್ರ ಅವರ ಕರುಳು ಮಿಡಿಯುತ್ತಿರುತ್ತದೆ ಎಂದು ದೂರಿದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎಲ್ಲಾ ಜಾತಿ, ಪಕ್ಷದ ಫಲಾನುಭವಿಗಳಿಗೆ ನಮ್ಮ ಸರ್ಕಾರದ ಯೋಜನೆಗಳು ತಲುಪುತ್ತಿದೆ. ಇದರ ಜೊತೆಗೆ ರಸ್ತೆ, ಚರಂಡಿಯಂತಹ ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಕೆ. ಮಹಮದ್, ತಾ.ಪಂ. ಮಾಜಿ ಸದಸ್ಯ ತಿಮ್ಮಯ್ಯ, ಕಾಂಗ್ರೆಸ್ ಮುಖಂಡ ಜೆ.ಬಿ.ಮಹೇಶ್, ಶಿವಾನಂದ್, ಜೈರಾಂ, ಸುರೇಶ್ ಇತರರು ಇದ್ದರು.
Foundation laying for road and drainage works at various places in Kamenahalli Constituency