ಚಿಕ್ಕಮಗಳೂರು: : ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಹಾಗೂ ಹಾಲಿ ಕಾರವಾರ ನೌಕಾದಳದ ಸೀಬರ್ಡ್ ವಿಶೇಷ ಭೂಸ್ವಾಧೀನ ಅಧಿಕಾರಿ ಉಮೇಶ್ ರನ್ನ ಚಿಕ್ಕಮಗಳೂರು ಅರಣ್ಯ ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲೂಕಿನ ಉಳಿನಾಗರ ಗ್ರಾಮದಲ್ಲಿ ಸರ್ಕಾರಿ ಜಮೀನನ್ನ ಅಕ್ರಮವಾಗಿ ನಾಲ್ವರಿಗೆ ಪರಭಾರೆ ಮಾಡಿಕೊಟ್ಟ ಹಿನ್ನೆಲೆ ಎ.ಸಿ. ಕಾಂತರಾಜ್ (ಅಸಿಸ್ಟೆಂಟ್ ಕಮಿಷನರ್) ದೂರಿನ ಮೇರೆಗೆ ಕಡೂರು ಪೊಲೀಸರು ಕಳೆದ ವಾರ ಬೆಂಗಳೂರಿನ ಪೀಣ್ಯದಲ್ಲಿ ಉಮೇಶ್ ರನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.ನಿನ್ನೆ ಜಾಮೀನು ಪಡೆದು ಇಂದು ಬಿಡುಗಡೆಯಾದ ಕೂಡಲೇ ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ಅರಣ್ಯ ಅಧಿಕಾರಿಗಳು ಉಮೇಶ್ ರನ್ನ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಭೂ ಮಂಜೂರಾತಿ ಹಗರಣದಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ತಹಸೀಲ್ದಾರ್ ಜೆ.ಉಮೇಶ್ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಕಡೂರು ತಾಲ್ಲೂಕು ಎಮ್ಮೆದೊಡ್ಡಿ ಗ್ರಾಮದ ಸ.ನಂ. 70 ರಲ್ಲಿ ಮೀಸಲು ಅರಣ್ಯದಲ್ಲಿರುವ ಸೆಕ್ಷನ್(೪)ರಲ್ಲಿ ಬರುವ ಜಮೀನನ್ನು ಸಹ ಉಮೇಶ್ ತಹಸೀಲ್ದಾರ್ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಪರಭಾರೆ ಮಾಡಿಕೊಟ್ಟಿದ್ದ ಆರೋಪ ಎದುರಿಸುತ್ತಿದ್ದಾನೆ.
ಈ ಪ್ರಕರಣದಲ್ಲಿ ತನಿಖೆಗಾಗಿ ಅರಣ್ಯ ಸಿಬ್ಬಂದಿ ಉಮೇಶರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
Umesh is again in the custody of forest officials