ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಬರುವ ಸ್ವರ್ಣ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿಸಿ ತಯಾರಿ ಮಾಡುವುದು ಹಾಗೂ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ೧೯೭೪ ರ ಕಲಂ ೪೫-ಎ ಅನ್ವಯ ದಂಡವನ್ನು ೧೦,೦೦೦ ರೂ. ದಂಡ ಮತ್ತು ಜೈಲುವಾಸವನ್ನೂ ವಿಽಸುವ ಅವಕಾಶವಿರುತ್ತದೆಂದು ತಿಳಿಸಿದ್ದಾರೆ.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗಧಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡುವುದು.
ಗರಿಷ್ಠ ೫ ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಬೇಕು ಹಾಗೂ ಪ್ರತಿಷ್ಟಾಪಿಸಬೇಕು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸಬೇಕು. ಪ್ಲಾಸ್ಟಿಕ್ ಫ್ಲಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ರಾತ್ರಿ ೧೦ ರಿಂದ ಬೆಳಗ್ಗೆ ೬ ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ನಿಷೇಧ. ನಿರ್ದಿಷ್ಠ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗಣಪತಿಗಳನ್ನು ನಿರ್ದಿಷ್ಠ ಪಡಿಸಿದ ಕಲ್ಯಾಣಿಗಳಲ್ಲಿ ವಿಲೇವಾರಿ ಮಾಡಬೇಕು.
ಶಬ್ದ ಮಾಲಿನ್ಯ (ನಿಬಂಧನೆ ಮತ್ತು ನಿಯಂತ್ರಣ) ನಿಯಮಗಳು, ೨೦೦೦ರ ನಿಯಮಗಳು ೨(ಸಿ)ರಡಿಯಲ್ಲಿ ವ್ಯಾಖ್ಯಾನಿಸಲಾದ ನಿಯೋಜಿತ ಪ್ರಾಽಕಾರದಿಂದ ಲಿಖಿತ ಅನುಮತಿಯನ್ನು ಪಡೆಯದ ಹೊರತು ಧ್ವನಿವರ್ಧಕ, ಸಾರ್ವಜನಿಕ ಗಣೇಶ ಪೆಂಡಾಲ್ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸುವಂತಿಲ್ಲ. ಸಾಂದರ್ಭಿಕವಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ೭ ದಿನಗಳಿಗೆ ಮೀರದಂತೆ ನಿರಂತರ ಬಳಕೆಗೆ ಧ್ವನಿವರ್ಧಕ, ಸಾರ್ವಜನಿಕ ಗಣೇಶ ಪೆಂಡಾಲ್ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸಲು ಪೋಲೀಸ್ ಇಲಾಖೆಯಿಂದ ಅನುಮತಿ/ಪರವಾನಗಿಯನ್ನು ಕರ್ನಾಟಕ ಪೋಲೀಸ್ ಕಾಯ್ದೆ, ೧೯೬೩ರನ್ವಯ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಸಂಬಂಧಿಸಿದ ಮಾರ್ಗಸೂಚಿಗಳನ್ವಯ ಪಡೆಯಬೇಕು. ಹಾಗೆ ನೀಡಲಾದ ಅನುಮತಿ, ಪರವಾನಗಿಯನ್ನು ಶಬ್ದ ಮಾಲಿನ್ಯ (ನಿಬಂಧನೆ ಮತ್ತು ನಿಯಂತ್ರಣ) ನಿಯಮಗಳು ಅನುಸರಿಸಬೇಕು.
ಉತ್ಸವ ಆಚರಿಸಲು ಬೇಕಾದ ಪೂರ್ವ ತಯಾರಿಗೆ ಸಂಬಂಽಸಿದಂತೆ ಪೋಲೀಸ್, ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯುವುದು ನಿಯಮಾನುಸಾರ ಧ್ವನಿವರ್ಧಕಗಳನ್ನು ಬಳಸಲು ಪೋಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು. ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಪೆಂಡಾಲ್ಗಳಲ್ಲಿ ಬಲೂನ್ಗಳು, ಬಲೂನ್ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್ಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್ಗಳು, ಪ್ಲಾಸ್ಟಿಕ್ ಐಸ್ಕ್ರೀಮ್ ಸ್ಟಿಕ್ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೆರೀನ್ (ಥರ್ಮೊಕೋಲ್)ಗಳನ್ನು ಬಳಸದಂತೆ ನಿಗಾವಹಿಸಲಾಗಿದೆ.
ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳು, ಪ್ಲಾಸ್ಟಿಕ್ ಧ್ವಜಗಳು, ಅಂಟಿಕೊಳ್ಳುವ ಫಿಲ್ಮ್ಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್ಗಳು, ಕಪ್ಗಳು, ಲೋಟಗಳು ಮತ್ತು ಫೋರ್ಕ್ಗಳು, ಚಮಚಗಳು, ಚಾಕುಗಳು, ಪ್ಲಾಸ್ಟಿಕ್ ಟ್ರೇಗಳು, ಸ್ವೀಟ್ ಬಾಕ್ಸ್ಗಳು, ಆಮಂತ್ರಣ ಪತ್ರಗಳು, ಸಿಗರೇಟ್ ಪ್ಯಾಕೆಟ್ಗಳ ಸುತ್ತ ಸುತ್ತುವ ಪದರ ಅಥವಾ ಪ್ಯಾಕಿಂಗ್ ಫಿಲ್ಮ್ಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಕ್ಲಿಂಗ್ ಫಿಲ್ಮ್ಸ್ ಮತ್ತು ಪ್ಲಾಸ್ಟಿಕ್ ಸ್ಟಿಕರ್ಗಳು ನಿಷೇಧಿತವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ನಿಷೇಧಿತ ವಸ್ತುಗಳನ್ನು ಬಳಸಬಾರದು ಎಂದು ತಿಳಿಸಿದ್ದಾರೆ.
ಹಿರೇಮಗಳೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ
ಚಿಕ್ಕಮಗಳೂರು ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗುವ ಗಣೇಶ ಮೂರ್ತಿಗಳನ್ನು ದಂಟರಮಕ್ಕಿಯ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ಕೆರೆಯ ಅಭಿವೃದ್ಧಿ ಕಾಮಗಾರಿಯ ಹಿನ್ನಲೆಯಲ್ಲಿ ಕಲ್ಯಾಣಿ ಮುಚ್ಚಲಾಗಿದೆ. ಹಾಗಾಗಿ ಹಿರೇಮಗಳೂರಿನ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಬೇಕಾದ ಸಿದ್ಧತೆಯನ್ನು ನಗರಸಭೆ ಮಾಡಿಕೊಳ್ಳುತ್ತಿದೆ.
POP Swarnagouri-Ganesha Idol Dissolution Ban