ಚಿಕ್ಕಮಗಳೂರು: ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಪುರ್ಣಗೊಳಿಸಬೇಕು ಎಂದು ಆಗ್ರಹಿಸಿ ಆ ಭಾಗದ ಹಲವು ಹಳ್ಳಿಗಳ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಬೈಕ್ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.
ಹಳುವಳ್ಳಿ, ಮತ್ತಿಕೆರೆ ಹಳ್ಳದಿಂದ ಆರಂಭವಾದ ಬೈಕ್ ಜಾಥಾ ಮಳಲೂರು, ಶಕ್ತಿನಗರ, ರಾಂಪುರ, ಐಜಿ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕಿನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಹಸಿರು ಸಾಲಿನೊಂದಿಗೆ ಆಗಮಿಸಿದ್ದ ಹತ್ತಾರು ಹಳ್ಳಿಯ ಜನ ಮಳಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದ ರಾಜಕಾರಣಿಗಳು ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ೧೬೦೦ ಕ್ಕೂ ಹೆಚ್ಚು ರೈತರ ಜಮೀನಿಗೆ ನೀರುಣಿಸುವ ಮಳಲೂರು ಏತ ನೀರಾವರಿ ಯೋಜನೆ ೧೯೯೮ ರಲ್ಲಿ ಆರಂಭವಾದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
೧೯೯೮ ರಲ್ಲಿ ಸರಕಾರದ ಅನುಮೋದನೆ ದೊರೆತು ೨೦೦೦ ನೇ ಸಾಲಿನಲ್ಲಿ ಶಂಕು ಸ್ಥಾಪನೆಯಾಗಿ ಆರಂಭಿಕ ೨.೫೮ ಕೋಟಿರೂ ವೆಚ್ಚದಲ್ಲಿ ಯೋಜನೆ ಆರಂಭಿಸಿದ್ದು ಇಲ್ಲಿಯವರೆಗೆ ಯೋಜನಾ ವೆಚ್ಚ ಹೆಚ್ಚಾಯಿತೆ ವಿನಾಃ ಯೋಜನೆ ಪೂರ್ಣಗೊಳ್ಳಲಿಲ್ಲಎಂದು ದೂರಿದರು.
ಅನೇಕ ಪಕ್ಷಗಳು, ಜನಪ್ರತಿನಿಗಳು ಬದಲಾದರೇ ಹೊರತು ಕಾಮಗಾರಿ ಪೂರ್ಣಗೊಳಿಸಿ ರೈತರ ಹೊಲಗದ್ದೆಗಳಿಗೆ ನೀರು ಕೊಡಲು ಯಾವ ಜನಪ್ರತಿನಿಗಳು ಇಚ್ಛಾಶಕ್ತಿ ತೋರಲಿಲ್ಲ ಎಂದು ಆರೋಪಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ ಮಾತನಾಡಿ ಕಳೆದ ೨೩ ವರ್ಷದಿಂದ ಒಂದು ಸಣ್ಣ ಯೋಜನೆ ಪೂರ್ಣಗೊಳಿಸದ ರಾಜಕಾರಣಿಗಳಿಗೆ ನಾಚಿಕೆ ಆಗಬೇಕು. ಒಂದು ತಿಂಗಳು ಗಡುವು ನೀಡುತ್ತೇವೆ ಯೋಜನೆ ಕೈಗೆತ್ತಿಕೊಳ್ಳದಿದ್ದರೆ ಮೂಡಿಗೆರೆ ಶಾಸಕರ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು.
ಸಂಘದ ಕಾರ್ಯದರ್ಶಿ ಬಿ.ಡಿ.ಮಹೇಶ್ ಮಾತನಾಡಿದರು. ರೈತ ಮುಖಂಡರಾದ ಬಸವರಾಜು. ಮಂಜುನಾಥ, ಚಂದ್ರಶೇಖರ, ಲೋಕೇಶ ಮತ್ತಿತರರಿದ್ದರು.
Rajya Raitha Sangh Baikjath