ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರ ಸಂಭಂದ ಜನರೊಂದಿಗೆ ಗಟ್ಟಿಯಾಗಿ ಬೆಳೆಯಬೇಕು. ಅವರ ಕಷ್ಟ, ಸುಖದ ಜೊತೆಗೆ ಭಾಗಿಯಾಗಿ ಅದಕ್ಕೊಂದು ಸಾಂಸ್ಥಿಕ ರೂಪ ನೀಡಬೇಕು ಎಂದು ಮಾಜಿ ಶಾಸಕ ಸಿ.ಟಿ.ರವಿ ಕರೆ ನೀಡಿದರು.
ಅವರು ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪ್ರವಾಸಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬೂತ್ ಮಟ್ಟದ ಕಾರ್ಯಕರ್ತರನ್ನು ಸಕ್ರೀಯ ಹಾಗೂ ಜನಸ್ನೇಹಿಗೊಳಿಸಬೇಕು. ಒಂದು ರಾಜಕೀಯ ಪಕ್ಷಕ್ಕೆ ಕಾರ್ಯಕರ್ತ ಪಕ್ಷದ ಸಭೆಗೆ ಬರುವುದರಿಂದ ಮಾತ್ರ ಶಕ್ತಿ ಬರುವುದಿಲ್ಲ. ಆತ ಜನರ ನಡುವೆಯೂ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ನಾವು ಬರೇ ಚುನಾವಣೆ ಗೆಲ್ಲುವುದಕ್ಕೆ ಮಾತ್ರ ರಾಜಕೀಯ ಪಕ್ಷವನ್ನು ಕಟ್ಟಿಲ್ಲ. ಸಮಾದಜದಲ್ಲಿ ಪರಿವರ್ತನೆ ತರಬೇಕು ಎನ್ನುವುದು ಉದ್ದೇಶ. ಜಾತಿ ಬೇಧ ಹೋಗಲಿ ಎಂದು ಬೋರ್ಡ್ ಹಾಕಿದರೆ, ಫ್ಲೆಕ್ಸ್ ಹಾಕಿದರೆ ಹೋಗುವುದಿಲ್ಲ. ಸಂಬಂಧಗಳನ್ನು ಕಟ್ಟಿದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.
ಈ ಸರ್ಕಾರ ಬಂದ ಮೇಲೆ ರೈತ ವಿದ್ಯಾನಿಧಿಯನ್ನು ರದ್ದುಪಡಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲಾ ಬರಗಾಲ ಬರುವುದು ಸತ್ಯ. ಇಂತಹ ವಿಚಾರಗಳನ್ನು ಜನರ ಗಮನಕ್ಕೆ ತರಬೇಕು. ವಾಟ್ಸ್ ಆಫ್ ಗ್ರೂಪ್ಗೆ ಮತದಾರರನ್ನು ಸೇರ್ಪಡೆಗೊಳಿಸಬೇಕು. ಹಿಂದಿನವರು ತಂದಿದ್ದ ಅನುದಾನಕ್ಕೆ ಈಗ ಗುದ್ದಲಿ ಪೂಜೆ ನಡೆಯುತ್ತಿದೆ. ಇವರ ಯೋಗ್ಯತೆಗೆ ಒಂದು ಪೈಸೆ ತಂದಿಲ್ಲ ಎನ್ನುವುದನ್ನು ಜನತೆಗೆ ಹೇಳಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಬಂದು ೧೦೦ ದಿನಗಳು ಕಳೆದಿವೆ. ನೂರು ದಿನ ನೂರಾರು ತಪ್ಪುಗಳು ಎನ್ನುವ ಚಾರ್ಜ್ಶೀಟನ್ನೂ ನಾವು ಹೊರತಂದಿದ್ದೇವೆ. ಕಾರ್ಯಕರ್ತರು ಆ ತಪ್ಪುಗಳನ್ನು ಗಮನಿಸಬೇಕು. ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸುವ ಅವಕಾಶವನ್ನು ರದ್ದು ಪಡಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಯುವಕ ಸಂಘ ತೆರೆಯುವ ಯುವ ಶಕ್ತಿ ಯೋಜನೆಯನ್ನು ರದ್ದು ಪಡಿಸಿದ್ದಾರೆ. ಸ್ವಸಹಾಯ ಸಂಘಕ್ಕೆ ೫ ಲಕ್ಷ ರೂ. ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆ ರದ್ದು ಪಡಿಸಿದ್ದಾರೆ. ರೈತರಿಗೆ ೧೦ ಸಾವಿರ ರೂ. ನೀಡುವ ಭೂ ಸಿರಿ ಯೋಜನೆ ರದ್ದು ಪಡಿಸಿದ್ದಾರೆ. ಶ್ರಮಶಕ್ತಿ ಯೋಜನೆ, ಕ್ಷೀರ ಸಂವೃದ್ಧಿ ಯೋಜನೆ, ರೈತರಿಗೆ ವಾರ್ಷಿಕ ೪ ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳನ್ನು ರದ್ದು ಪಡಿಸಿದ್ದಾರೆ ಇದನ್ನು ಜರನ ಮಧ್ಯೆ ಕೊಂಡೊಯ್ಯಬೇಕು ಎಂದರು.
ಗರೀಬಿ ಕಲ್ಯಾಣ ಯೋಜನೆಯಲ್ಲಿ ಹಿಂದೆ ಕೇಂದ್ರ ಸರ್ಕಾರ ೫ ಕೆಜಿ ಅಕ್ಕಿ ಕೊಡುತ್ತಿತ್ತು. ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಈಗ ಕೇಂದ್ರ ಕೊಡುತ್ತಿರುವುದರಲ್ಲೂ ಕಡಿತ ಮಾಡಿದ್ದಾರೆ. ಎಸ್ಸಿಪಿ, ಟಿಎಸ್ಪಿಯಡಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ೧೧ ಕೋಟಿ ರೂ. ಅನುದಾನವನ್ನು ಗ್ಯಾರೆಂಟಿಗೆ ಬಳಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಯಾವ ಎಸ್ಸಿ, ಎಸ್ಟಿ ಸಚಿವರು, ಮುಖಂಡರು ಪ್ರಶ್ನೆ ಮಾಡಲೇ ಇಲ್ಲ. ಇದರಿಂದ ಎಸ್ಸಿ, ಎಸ್ಟಿ ಸಮಾಜಕ್ಕೆ ನಷ್ಟವಾಗಿದೆ ಇದನ್ನು ಅವರ ಸರ್ಕಾರ ಬಂದ ಮೇಲೆ ಮದ್ಯದಿಂದ ಹಿಡಿದು ವಿದ್ಯುತ್ ಎಲ್ಲಾ ಬೆಲೆಯನ್ನೂ ಏರಿಸಿದ್ದಾರೆ. ಅಭಿವೃದ್ಧಿಗೆ ಕೊಟ್ಟ ಎಲ್ಲಾ ಅನುದಾನವನ್ನೂ ತಡೆಹಿಡಿದಿದ್ದಾರೆ. ತಮಿಳು ನಾಡಿಗೆ ಕಾವೇರಿ ಬಿಟ್ಟರು ಅದನ್ನು ಯಾರೂ ಪ್ರಶ್ನಿಸಲೇ ಇಲ್ಲ. ಕೇಂದ್ರ ಗ್ಯಾಸ್ ಬೆಲೆ ಕಡಿಮೆ ಮಾಡಿದೆ ಇದನ್ನು ಜನರ ಗಮನಕ್ಕೆ ತರಬೇಕು. ರೈತರು ೫ ಲಕ್ಷ ರೂ.ಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಅವರಿಗೆ ೧೦ ಲಕ್ಷ ಕೊಡುತ್ತೇವೆ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಪ್ರಶ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಸೀತಾರಾಮ ಭರಣ್ಯ, ಕುರುವಂಗಿ ವೆಂಕಟೇಶ್, ಪಿಳ್ಳೇನಳ್ಳಿ ರಮೇಶ್ ಇತರರು ಇದ್ದರು
travel workers meeting