ಚಿಕ್ಕಮಗಳೂರು: ಭಗವಾನ್ ಶ್ರೀ ಕೃಷ್ಣನ ಮುಖವಾಣಿಯಾದ ಭಗವದ್ಗೀತೆ ಎಲ್ಲರ ಬದುಕಿನ ಗೀತೆಯಾಗಬೇಕು ಎಂದು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ ಸಲಹೆ ಮಾಡಿದರು.
ಸಮೃದ್ಧಿ ಕಿಡ್ಸ್ ಕ್ರಿಯೇಟಿವಿಟಿ ಶಾಲೆ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪ ದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವ ತತ್ವ, ಸಿದ್ಧಾಂತ, ಧರ್ಮಾಚರಣೆ ಸಂದೇಶ ಗಳು ಸಾರ್ವಕಾಲಿಕ ಸತ್ಯಗಳು. ಅವುಗಳನ್ನು ನಾವು ಮೈಗೂಡಿಸಿಕೊಳ್ಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ ಲಭಿಸುತ್ತವೆ ಇಹಕ್ಕೂ ಪರಕ್ಕೂ ಅವು ದಾರಿದೀಪ ವಾಗುತ್ತವೆ ಎಂದರು.
ಭಗವಾನ್ ಶ್ರೀಕೃಷ್ಣನ ಬದುಕು ನಮಗೆಲ್ಲರಿಗೂ ಆದರ್ಶವಾಗಬೇಕು. ಆತನ ಧರ್ಮಾಚರಣೆ ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಶಂಕರನಾರಾಯಣ ಭಟ್, ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಶ್ರೀ ಕೃಷ್ಣನ ವೇಷ ಧರಿಸಿ ಸಂಭ್ರ ಮಿಸಿದರು. ವಿದ್ಯಾರ್ಥಿಗಳಿಂದ ಪದ್ಮ ವೇಷ ಸ್ಪರ್ಧೆ, ನೃತ್ಯ ಸ್ಪರ್ಧೆ ನಡೆದವು.
ಶಾಲೆಯ ಕಾರ್ಯಕಾರಿ ಸಮಿತಿ ಸದಸ್ಯ ಆನಂದ್ ಕುಮಾರ್ ಶೆಟ್ಟಿ, ಪ್ರಾಂಶುಪಾಲೆ ಪೂಜಾ ಉಪಸ್ಥಿತರಿದ್ದರು.
Shri Krishna Janmashtami