ಚಿಕ್ಕಮಗಳೂರು: ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ತಿರುವಳ್ಳುವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಶಂಕರ್ ಕುಮಾರ್ ತಿಳಿಸಿದರು.
ಭಾನುವಾರ ಎಂ.ಇ.ಎಸ್ ಕಾಲೇಜು ಆವರಣದಲ್ಲಿ ತಿರುವಳ್ಳುವರ್ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ೧೧ ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ ನಮ್ಮ ಸಹಕಾರ ಏಳಿಗೆ ಮತ್ತು ಯಶಸ್ವಿಗೆ ಎಲ್ಲಾ ಸದಸ್ಯರ ಸಲಹೆ, ಸಹಕಾರ ಪ್ರೋತ್ಸಾಹವೇ ಮುಖ್ಯ ಕಾರಣ ಎಂದರು.
ನಮ್ಮ ಸಂಘದಲ್ಲಿ ಇಲ್ಲಿಯ ವರೆಗೆ ಒಟ್ಟು ೧೨೬೫ ಸದಸ್ಯರಿದ್ದು, ಒಟ್ಟು ಷೇರಿನ ಮೊತ್ತ ರೂ ೧೪.೩೭.೦೦೦ ರೂ ಗಳಾಗಿದ್ದು, ಸಹ ಸದಸ್ಯರ ಷೇರಿನ ಮೊತ್ತ ೪ ಸಾವಿರ ಹಾಗೂ ನಾಮ ಪತ್ರ ಸದಸ್ಯ ಷೇರಿನ ಮೊತ್ತ ೩೧.೮೦೦ ರೂಗಳಾಗಿರುತ್ತವೆ, ಒಟ್ಟು ಷೇರಿನ ಮೊತ್ತ ೧೪.೭೨.೮೦೦ ರೂಗಳಾಗಿರುತ್ತವೆ ಎಂದರು.
ನಮ್ಮ ಸಹಕಾರ ಸಂಘದ ವತಿಯಿಂದ ವ್ಯಾಪಾರ ಅಭಿವೃದ್ಧಿ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ ಮತ್ತು ಮನೆ ಕಟ್ಟಲು ಸಾಲವನ್ನು ನೀಡುವುದರ ಜೊತೆಗೆ ತುರ್ತು ಸಾಲವಾಗಿ ೧೦ ರಿಂದ ೨೫ ಸಾವಿರ ನೀಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ಸ್ವಂತ ನಿವೇಶನ ಮಾಡಿ ಮಾದರಿ ಪತ್ತಿನ ಸಹಕಾರಿ ಸಂಘ ಮಾಡಲಾಗುವುದು, ಎಲ್ಲಾ ಸದಸ್ಯರು ತಮ್ಮ ಸಲಹೆ ಸಹಕಾರ ನೀಡುವುದರ ಜೊತೆಗೆ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ನಿರ್ದೇಶಕರಾದ ಜಿ.ರಮೇಶ್ ಮಾತನಾಡಿ ನಮ್ಮ ಸಹಕಾರ ಸಂಘ ಪ್ರಾರಂಭವಾಗಿದ್ದೆ ಬಡವರ ಅನುಕೂಲಕ್ಕಾಗಿ, ಕೋವಿಡ್ನಂತಹ ಸಂದರ್ಭದಲ್ಲೂ ಸಹ ನಮ್ಮ ಸಂಘದ ವತಿಯಿಂದ ಹೆಚ್ಚಿನ ಸಾಲ ನೀಡಲಾಗಿತ್ತು, ಸಂಘದ ಸದಸ್ಯರುಗಳು ತಮ್ಮ ಆರ್ಥಿಕ ಅಭಿವೃದ್ಧಿಗೆ ಸಂಘದಿಂದ ಸಾಲ ಪಡೆದು ಮರುಪಾವತಿಯನ್ನು ಮಾಡಿ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ.ಕೃಷ್ಣರಾಜ್, ನಿರ್ದೇಶಕರಾದ ಆರುಮುಗಂ, ಸುಶೀಲ್ ದಾಸ್, ಲೋಕೇಶ್, ಲಕ್ಷ್ಮೀನಾರಾಯಣ, ಗೋಪಿನಾಥ್, ಮಧು, ಮಂಜುನಾಥ್, ಅನೀಸಾ ಬೆನೆಜರ್, ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂದೀಪ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Thiruvalluvar State Cooperative Society