ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಕರ್ತವ್ಯ ನಿರ್ವಹಿಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಬಗ್ಗೆ ಕಾಳಜಿ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರು, ರೈತರು ಬರುತ್ತಾರೆ. ಅವರಿಗೆ ಮಾನವೀಯ ದೃಷ್ಟಿ ಕೋನದಿಂದ ಚಿಕಿತ್ಸೆ ನೀಡಬೇಕು. ಕರ್ತವ್ಯದ ಸಂದರ್ಭದಲ್ಲಿ ನಿರ್ಲಕ್ಷತನದಿಂದ ರೋಗಿಗಳಿಗೆ ತೊಂದರೆಯಾದರೆ ಕ್ಷಮಿಸುವುದಿಲ್ಲ. ಅಂತಹ ವೈದ್ಯ ಮತ್ತು ದಾದಿಯರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಶಿಕ್ಷಣ ಇಲಾಖೆಯಂತೆ ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಮತ್ತು ಸೂಕ್ಮತೆ ಹೊಂದಿರುವ ಇಲಾಖೆ ಇಲ್ಲಿ ತುರ್ತಾಗಿ ರೋಗಿಗಳಿಗೆ ಸ್ಪಂದನೆ ಸಿಗಬೇಕು. ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಂದಾಗುವ ಕೆಲವು ತಪ್ಪುಗಳಿಂದ ರೋಗಿಗಳಿಗೆ ಸಮಸ್ಯೆಗಳಾಗುತ್ತವೆ. ಈ ಬಗ್ಗೆ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು. ಚಿಕಿತ್ಸೆ ವೇಳೆ ನಿರ್ಲಕ್ಷ ತೋರಬಾರದು ಎಂದ ಅವರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಸರ್ಕಾರ ಉತ್ತೇಜನ ನೀಡುತ್ತದೆ. ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗಾಗಿ ಬಂದಾಗ ಅವರನ್ನು ಖಾಸಗಿ ಆಸ್ಪತ್ರೆಗಳಿಗೂ ಕಳುಹಿಸದೆ ನೀವೇ ಉತ್ತಮ ಚಿಕಿತ್ಸೆ ನೀಡಿದರೆ ಆಸ್ಪತ್ರೆಗಳಿಗೆ ಉತ್ತಮ ಹೆಸರು ಬರುತ್ತದೆ ಎಂದರು.
ಜಿಲ್ಲೆಯಲ್ಲಿ ಏಪ್ರಿಲ್ ೨೦೨೩ ರಿಂದ ಆಗಸ್ಟ್ ೨೦೨೩ ರವರೆಗೆ ೫೬೮೨ ಗರ್ಭಿಣಿಯರು ನೋಂದಾಯಿಸಿಕೊಂಡಿದ್ದು, ಶೇ ೯೭% ಎ.ಎನ್.ಸಿ ತಪಾಸಣೆಗಳನ್ನು ಸ್ವೀಕರಿಸಿದ್ದು ಕಡೂರು ತಾಲ್ಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆಯಲ್ಲದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಜಾಸ್ತಿ ಇರುವುದು ಕಂಡು ಬರುತ್ತಿದೆ, ಸಿಸೇರಿಯನ್ ಪ್ರಕರಣಗಳು ಹೆಚ್ಚಾಗಿ ಕಂಡು ವರದಿಯಾಗಿದ್ದು, ಸಿಸೇರಿಯನ್ ಪ್ರಕರಣಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕಲ್ಲದೆ ೩೮ ಶಿಶು ಮರಣ ಪ್ರಕರಣಗಳು ಕಂಡು ಬಂದಿದ್ದು, ಶಿಶು ಮರಣ ಪ್ರಕರಣಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ವೆಂಟಿಲೇಟರ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ೨ನೇ ಸುತ್ತಿನ ಮಿಷನ್ ಇಂದ್ರ ಧನುಷ್ ಲಸಿಕಾ ಅಭಿಯಾನ ಕೈಗೊಳ್ಳಲಾಗಿದ್ದು, ೨ನೇ ಸುತ್ತಿನಲ್ಲಿ ೬೦೮೫ ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ. ೧೦೪ ರಷ್ಟು ಸಾಧನೆಯಾಗಿದೆ. ಶಾಲಾ ಕೇಂದ್ರಗಳಲ್ಲಿ ಏಪ್ರಿಲ್ ೨೦೨೩ ರಿಂದ ಆಗಸ್ಟ್ ೨೦೨೩ ರವರೆಗೆ ೯೪೪೯೭೨ ಮಕ್ಕಳು ನೋಂದಣಿಯಾಗಿದ್ದು, ೩೮೪೮೧ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ೫೨೫೯ ಅಂಗನವಾಡಿ ಮಕ್ಕಳು ನೋಂದಣಿಯಾಗಿದ್ದು, ೫೧,೫೭೯ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥಬಾಬು ಸಭೆಗೆ ಮಾಹಿತಿ ನೀಡಿದರು.
ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಸೆಂಟರ್ಗಳನ್ನು ಆಗಾಗ್ಗೆ ತಪಾಸಣೆ ನಡೆಸಬೇಕು. ಭ್ರೂಣ ಲಿಂಗ ಪತ್ತೆ ಮಾಡುವುದು ಕಂಡು ಬಂದರೆ ಅಂತಹ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ಎಂಆರ್ಐ ಸ್ಕ್ಯಾನಿಂಗ್ ಮಿಷನ್ ಕೊಡಲಾಗುವುದು ಎಬಿಆರ್ಕೆಯಿಂದ ಬರುವ ಆದಾಯವನ್ನು ಡಾಕ್ಟರ್ಗಳು ಔಷಧಿ ಖರೀದಿಸಲು ಬಳಸಬಾರದು. ಅಗತ್ಯ ಔಷಧಿಗಳನ್ನು ಇಲಾಖೆಯಿಂದಲೇ ಸರಬರಾಜು ಮಾಡಲಾಗುವುದು ಎಂದರು.
ಸಭೆಯಲ್ಲಿ ಶಾಸಕರುಗಳಾದ ಹೆಚ್.ಡಿ. ತಮ್ಮಯ್ಯ, ಶ್ರೀನಿವಾಸ್, ಆನಂದ್, ಟಿ.ಡಿ. ರಾಜೇಗೌಡ, ನಯನ ಮೋಟಮ್ಮ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಹಿಂದುಮತಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಮೈಸೂರು ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ ಮುಂತಾದವರಿದ್ದರು.
District Health and Family Welfare Department Progress Review Meeting