ಚಿಕ್ಕಮಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸುಭದ್ರವಾದ ಸಂವಿಧಾನವನ್ನು ರಚಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಕೆಳ ವರ್ಗದ ಜನ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸದಾ ಋಣಿಯಾಗಿರಬೇಕು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ಏಳು ಜನ ಸದಸ್ಯರಿದ್ದರೂ. ಅವರಲ್ಲಿ ಐವರ ಗೈರು ಹಾಜರಿಯ ನಡುವೆಯೂ ತಮ್ಮ ಕಾಲಿಗೆ ಗ್ಯಾಂಗ್ರಿನ್ ಆಗಿ ಅನಾರೋಗ್ಯದಿಂದ ಬಳಲು ತ್ತಿದ್ದರೂ ಸಹ ಅದನ್ನು ಲೆಕ್ಕಿಸದೇ ಶೋಷಿತ ವರ್ಗಕ್ಕೆ ಹಕ್ಕುಗಳನ್ನು ಕೊಡಿಸಬೇಕೆಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಬಹಳಷ್ಟು ಶ್ರಮಪಟ್ಟು ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ನಮ್ಮದು. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಹಕ್ಕನ್ನು ಒದಗಿಸುತ್ತದೆ ಎಂದ ಅವರು, ಅಂತಹ ಸಂವಿಧಾನವನ್ನು ತಿರುಚುವ ಕೆಲಸ ನಡೆಯುತ್ತಿರುವುದು ದುರಾದೃಷ್ಟಕರ ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ವನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಅದು ದೇಶದಲ್ಲಿ ಯಥಾವತ್ತಾಗಿ ಜಾರಿಯಾ ಗುತ್ತದೆ ಎಂದರು.
ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಮುಂದಾಗಿರುವುದು ಅರ್ಥ ಪೂರ್ಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಪ್ರಜಾಪ್ರಭುತ್ವ ದಿನಾಚರಣೆಯ ದಿನವೇ ದೇಶಕ್ಕೆ ದೊಡ್ಡ ಹಬ್ಬ ಎಂದರು.
ನಮ್ಮ ಸಂವಿಧಾನವನ್ನು ಜಗತ್ತಿನ ಎಲ್ಲಾ ಮುಂದುವರೆದ ದೇಶಗಳೂ ಒಪ್ಪಿಕೊಂಡಿದ್ದರೂ, ನಮ್ಮಲ್ಲಿ ಇನ್ನು ಅದು ಇಡಿಯಾಗಿ ಜಾರಿಯಾಗದಿರುವುದು ದುರಂತ ಎಂದ ಅವರು, ಕೇಂದ್ರ ಸರ್ಕಾರ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಂಕಲ್ಪವನ್ನು ಸಮಾರಂಭದಲ್ಲಿ ಮಾಡಲಾಯಿತು. ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್.ಗಂಗಾಧರ್, ಬಿ.ಎಂ.ಶಂಕರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳಾ, ಹರೀಶ್, ರಮೇಶ್, ಬಸವರಾಜ್ ಉಪಸ್ಥಿತರಿದ್ದರು.
International Democracy Day celebration at BSP office