ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ, ಸತತ ಅಭ್ಯಾಸದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ತಿಳಿಸಿದರು.
ಶನಿವಾರ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಸಂಯುಕ್ತಾಶ್ರಯದಲ್ಲಿ ಯುವ ಜನೋತ್ಸವ ೨೦೨೩ರ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಸತತ ಅಭ್ಯಾಸದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ, ನಿಮ್ಮ ಆಸಕ್ತಿಗೆ ಅನುಗುಣವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ ಎಂದರು.
ಡಿ.ಹೆಚ್.ಓ ಅಶ್ವಥ್ಬಾಬು ಮಾತನಾಡಿ ೨೦೨೩ರ ಯುವ ಜನೋತ್ಸವ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ಬಾರಿಯು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಡಿಯಲ್ಲಿ ಪ್ರಬಂದ ಸ್ಪರ್ಧೆ ಮತ್ತು ಬೀದಿ ನಾಟಕ ಏರ್ಪಡಿಸಲಾಗಿದೆ, ಸೆ ೧೭ ರಿಂದ ೨೫ರ ವರೆಗೆ ನಡೆಯುವ ಸ್ಪರ್ಧೆಯಲ್ಲಿ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡುವುದರ ಜೊತೆಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ವಿವೇಕಾನಂದ ಯೂತ್ ಮೂಮೆಂಟ್ನ ಹಿರಿಯ ಕಾರ್ಯಕ್ರಮ ಅಧಿಕಾರಿಗಳಾದ ರಾಜುನರಸಯ್ಯ ಮಾತನಾಡಿ ರಾಷ್ಟ್ರೀಯ ಯುವ ಜನೋತ್ಸವ ಅಂಗವಾಗಿ ಯುವ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಯುವ ಜನರಲ್ಲಿ ಹೆಚ್.ಐ.ವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಆರೋಗ್ಯಯುತ ಹವ್ಯಾಸಗಳನ್ನು ಬೆಳೆಸುವುದರ ಮೂಲಕ ಭಾರತದ ಉತ್ತಮ ಪ್ರಜೆಗಳನ್ನಾಗಿ ಮಾಡಿ ಅವರ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ಸಮಾಜವನ್ನು ನಿರ್ಮಾಣ ಮಾಡುವ ಮತ್ತು ಯುವ ಪೀಳಿಗೆ ಅನುಭವಿಸುತ್ತಿರುವ ತೊಂದರೆಗಳ ನಿವಾರಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಯುವ ಜನತೆ ಹೆಚ್.ಐ.ವಿ ಸೇರಿದಂತೆ ಹಲವು ರೀತಿಯ ದುರಭ್ಯಾಸಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿದ್ದು ಇದರಿಂದ ಸಮಾಜಿಕ ಹೊರೆ ಹೆಚ್ಚಾಗುತ್ತಿದ್ದು, ಇಂದಿನ ದಿನಗಳಲ್ಲಿ ಯುವ ಜನರು ದುರಭ್ಯಾಸಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು, ಹೆಚ್ಚು ಜಾಗೃತರಾಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಹರೀಶ್ಬಾಬು, ಡಾ. ಮಂಜುನಾಥ್, ಡಾ. ಸೀಮಾ, ಡಾ. ಶಶಿಕಲಾ, ಯುವಜನ ಇಲಾಖೆಯ ಮಂಜುಳಹುಲ್ಲಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
Marathon competition held for college students