ಚಿಕ್ಕಮಗಳೂರು: ಸಮುದಾಯದ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾಕ್ಕೆ ದಿವಿಜ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವು ಇದುವರೆಗೆ ೧೧.೫೦ ಲಕ್ಷ ರೂ.ಗಳನ್ನು ಒದಗಿಸಿದೆ ಎಂದು ಸಂಸ್ಥೆಯ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎನ್.ಭಟ್ ತಿಳಿಸಿದರು.
ನಗರದ ಬ್ರಹ್ಮ ಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ ೨.೧೫ ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅನೇಕ ವರ್ಷಗಳಿಂದ ಬ್ರಾಹ್ಮಣ ಮಹಾಸಭಾ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಬೇಕಾದರೆ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿರಬೇಕಾಗುತ್ತದೆ. ಯಾವುದೇ ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿರುವ ಈ ಸಂಘಟನೆ ಬಲಗೊಳ್ಳಬೇಕಾದರೆ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರೂ ಕೂಡ ಆರ್ಥಿಕ ಸ್ವಾವಲಂಬನೆ ಹೊಂದಿರಬೇಕಾಗುತ್ತದೆ ಎಂದು ಹೇಳಿದರು.
೨೦೧೦ ರಲ್ಲಿ ದಿವಿಜ ಪತ್ತಿನ ಸಹಕಾರ ಸಂಘ ಪ್ರಾರಂಭವಾಗಿ ೧೩ ವರ್ಷಗಳನ್ನು ಪೂರೈಸಿದೆ. ಆರಂಭದಲ್ಲಿ ತಾಲ್ಲೂಕು ಮಟ್ಟದ ವ್ಯಾಪ್ತಿಯನ್ನು ಹೊಂದಿದ್ದ ಈ ಸಂಘವು ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದ ಐದು ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಉದ್ಯಮಿ ಡಿ.ಹೆಚ್.ನಟರಾಜ್ ಅವರ ನೇತೃತ್ವದ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಫಲವಾಗಿ ಕಳೆದ ವರ್ಷ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಸ್ಥೆ ಎಂಬ ಪ್ರಶಸ್ತಿಗೂ ಭಾಜನವಾಗಿದೆ ಎಂದು ತಿಳಿಸಿದರು.
ಇಲ್ಲಿ ಸೌಲಭ್ಯ ಪಡೆದ ಎಲ್ಲ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ಸಾಮಾಜಿಕ ಹೊಣೆಗಾರಿಕೆಯ ಜೊತೆಗೆ ಸಮುದಾಯದ ಪೀಳಿಗೆಯನ್ನು ಪುರಸ್ಕರಿಸಲು ಅನುಕೂಲವಾಗುವಂತೆ ಒಂದಷ್ಟು ಪಾಲನ್ನು ನೀಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಜಿಲ್ಲಾಮಟ್ಟದ ಅಧಿಕಾರಿ ಸರಸ ಕೃಷ್ಣ ಕಿರಣ್ ಮಾತನಾಡಿ, ವೃತ್ತಿಯ ಜೊತೆಗೆ ತಮ್ಮ ಮನೆಯಲ್ಲೇ ಆಸಕ್ತ ವಿದ್ಯಾರ್ಥಿಗಳಿಗೆ ಗಣಿತ ವಿಷಯಗಳನ್ನು ಬೋಧಿಸುತ್ತಿದ್ದು, ಪಿ.ಯು.ಸಿ. ಹಾಗೂ ಪದವಿ ಪಡೆದ ಬಳಿಕ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡಲು ಸಿದ್ಧರಿರುವುದಾಗಿ ತಿಳಿಸಿದರು. ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಜ್ಞಾನ ಬೆಳೆಸಿಕೊಳ್ಳಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡುವುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರದ ಹಿರಿಯ ವೈದ್ಯ ಡಾ.ಬಿ.ವಿ.ಸುರೇಶ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿದರು. ಬಿಎಂಎಸ್ ಕೋಶಾಧಿಕಾರಿ ಶ್ಯಾಮಲಾ ಎಂ.ರಾವ್, ನಿರ್ದೇಶಕ ಕೆ.ಆರ್.ದತ್ತಾತ್ರಿ ಮತ್ತಿತರರು ಇದ್ದರು.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ ೨೯ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೂ, ೩೨ ಮಂದಿ ವಿದ್ಯಾರ್ಥಿ ವೇತನಕ್ಕೂ ಭಾಜನರಾದರು. ಮಹಾಸಭಾದ ನಿರ್ದೇಶಕಿ ಎಸ್.ಶಾಂತಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕಿ ಜಯಶ್ರೀ ಜೋಷಿ ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಸಾವಿತ್ರಮ್ಮ ಕೃಷ್ಣಮೂರ್ತಿ ಅವರು ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆಗೆ ೨ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದರು.
ಶ್ರೀ ಶಂಕರ ವೇದ ವಿದ್ಯಾರ್ಥಿ ವೃಂದ ವೇದಘೋಷ, ನಿರ್ದೇಶಕಿಯರು ಪ್ರಾರ್ಥನೆ, ಕಾರ್ಯದರ್ಶಿ ಎನ್.ಕೆ.ಅಶ್ವಿನ್ ಸ್ವಾಗತ, ನಿರ್ದೇಶಕಿ ಸುಮಾ ಪ್ರಸಾದ್ ನಿರೂಪಣೆ, ನಿರ್ದೇಶಕಿ ಎಂ.ಎಸ್.ಚೈತ್ರಾ ವಂದನಾರ್ಪಣೆ ನೆರವೇರಿಸಿ ದರು.
Student Talent Award Distribution Programme