ಚಿಕ್ಕಮಗಳೂರು: ರೇಬೀಸ್ ವೈರಸ್ ಸೋಂಕು ವಿಸ್ತಾರಗೊಳ್ಳುವ ಮುನ್ನ ಸೂಕ್ತ ಸಮಯದಲ್ಲಿ ಲಸಿಕೆಗಳನ್ನು ಪಡೆದುಕೊಳ್ಳುವುದರಿಂದ ಮೃತರ ಸಂಖ್ಯೆಯನ್ನು ತಡೆಯಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|| ಬಿ.ಗೋಪಾಲಕೃಷ್ಣ ತಿಳಿಸಿದರು.
ಅವರು ಇಂದು ಎಐಟಿ ವೃತ್ತದಲ್ಲಿರುವ ಪ್ಯಾರಾ ಮೆಡಿಕಲ್ ಕಾಲೇಜು ಆವರಣದಲ್ಲಿ ಜಿ.ಪಂ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ’ವಿಶ್ವ ರೇಬೀಸ್ ದಿನಾಚರu’ ಪ್ರಯುಕ್ತ ಹುಚ್ಚುನಾಯಿ ರೋಗ ರೇಬೀಸ್ ಲಸಿಕಾ ಮಾಸಾಚರಣೆ ಹಾಗೂ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹುಚ್ಚುನಾಯಿ ಕಡಿತದ ರೇಬೀಸ್ನಿಂದಾಗಿ ಸರಾಸರಿ ೨೦ ಸಾವಿರ ಜನ ಸೂಕ್ತ ಕಾಲದಲ್ಲಿ ನಿಗಧಿತ ಸಮಯಕ್ಕೆ ಚಿಕಿತ್ಸೆ ಲಭಿಸದೇ ಮೃತಪಡುತ್ತಿದ್ದಾರೆ, ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಲಸಿಕೆಗಳನ್ನು ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ ಎಂದು ವಿವರಿಸಿದರು.
ದಿಪ್ತೀರಿಯಾ, ಟೆಟಾನಸ್, ರೇಬೀಸ್ ಮುಂತಾದ ರೋಗಗಳಿಗೆ ತುತ್ತಾದ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅವರ ಮೇಲೆ ಗಾಳಿ ಬೆಳಕು ಬಿದ್ದರೆ ಹುಚ್ಚುನಾಯಿಯಂತೆ ವರ್ತಿಸುತ್ತಾರೆ, ಕೆಲವರು ನಾಯಿ ಮರಿ ಕಡಿದಿದೆ ಅದರಿಂದೇನು ಆಗುವುದಿಲ್ಲ ಎಂದು ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು.
ಉಪನಿರ್ದೇಶಕ ಮೋಹನ್ಕುಮಾರ್ ಮಾತನಾಡಿ ಹುಚ್ಚುನಾಯಿ ಕಡಿತಕ್ಕೆ ಔಷಧಿ ಕಂಡುಹಿಡಿದ ಪ್ರೊ ಲೂಯಿಪಾಶ್ಚರ್ ಅವರ ನಿಧನದ ದಿನವಾದ ಸೆ.೨೮ ನ್ನು ವಿಶ್ವ ರೇಬೀಸ್ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿಯೂ ಆಚರಿಸುತ್ತಿದ್ದು, ರೇಬೀಸ್ ರೋಗ ನಿರ್ಮೂಲನೆ ಸಾಧ್ಯವಾಗದಿದ್ದರೂ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
೨೦೩೦ ರ ವೇಳೆಗೆ ಈ ರೋಗವನ್ನು ಮುಕ್ತವಾಗಿಸಲು ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಹುಚ್ಚು ನಾಯಿ ಕಡಿತದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಈ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಲ್ಲಿ ಹೆಚ್ಚಾಗಿ ವಿದ್ಯಾರ್ಥಿ ಯುವಜನರನ್ನು ಆಯ್ಕೆ ಮಾಡಿಕೊಂಡಿದ್ದು, ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ನಾಳೆ(ಸೆ.೨೮) ರಿಂದ ಒಂದು ತಿಂಗಳ ಕಾಲ ಎಲ್ಲಾ ರೀತಿಯ ನಾಯಿಗಳಿಗೆ ರೇಬೀಸ್ ಲಸಿಕೆ ನೀಡುವ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ರೇಬೀಸ್ ರೋಗವು ಸಾಮಾನ್ಯವಾಗಿ ಸೋಂಕುಯುಕ್ತ ಪ್ರಾಣಿಯ ಕಡಿತದಿಂದ ಮನುಷ್ಯ ಮತ್ತು ಇತರ ಪ್ರಾಣಿಗಳಿಗೆ ಹರಡುತ್ತದೆ. ರೇಬೀಸ್ ಅಥವಾ ನಾಯಿ ಹುಚ್ಚುರೋಗ ಪ್ರಪಂಚದ ಪ್ರಾಣಿಜನ್ಯ ಮನುಷ್ಯ ಸೋಂಕುಗಳಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ ಎಂದರು.
ನಿಡಘಟ್ಟ ಗಂಗಾಧರ್ ಪಶುಪಾಲನಾ ಇಲಾಖೆಯ ಡಾ|| ಮಂಜುನಾಥ್ ಸ್ವಾಗತಿಸಿದರು, ಡಾ|| ಗಂಗಾಧರ್ ಮತ್ತಿತರ ಪಶುವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
Vaccination at the right time can prevent the number of deaths