ಚಿಕ್ಕಮಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ನಿಮ್ಮಿಂದಾಗಬೇಕು ಎಂದು ಕೆಪಿಸಿಸಿ ವೀಕ್ಷಕರು, ಮೀನುಗಾರಿಕೆ ಹಾಗೂ ಬಂದರು ಸಚಿವರೂ ಆದ ಮಂಕಾಳ ಎಸ್.ವೈದ್ಯ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ಶಾಸಕರುಗಳು, ಮುಖಂಡರು, ಪ್ರಮುಖರ ಸಭೆ ನಡೆಸಿ ಮಾತನಾಡಿದರು.
ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಅಂತಿಮ ಆಗುವವರೆಗೆ ಆ ವಿಚಾರದಲ್ಲಿ ಸಾಮಾಜಿಕ ತಾಣಗಳು, ಪತ್ರಿಕೆಗಳಿಗೆ ಹೇಳಿಕೆಗಳನ್ನು ಕೊಡುವಂತಿಲ್ಲ ಎಂದು ಕೆಪಿಸಿಸಿ ಸೂಚನೆ ಇದೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈಗಾಗಲೇ ಉಡುಪಿ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಲಾಗಿದೆ. ಲೋಕಸಭೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅಲ್ಲಿನವರು ಭರವಸೆ ನೀಡಿದ್ದಾರೆ. ಸಧ್ಯದಲ್ಲೇ ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಸಮಾಲೋಚಿಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಒಮ್ಮತದ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡುತ್ತೇವೆ. ಎಲ್ಲರೂ ಸೇರಿ ಅವರನ್ನು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ನಮಗೂ ಇದೆ. ಜನರಿಗೆ ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಇನ್ನೂ ಹಲವು ಸೌಲತ್ತುಗಳನ್ನು ಕೊಡಲು ತಯಾರಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಕೇವಲ ೫ ಗ್ಯಾರಂಟಿಗಳಿಗೆ ನಮ್ಮ ಕಾರ್ಯಕ್ರಮಗಳು ಸೀಮಿತವಲ್ಲ. ಎಲ್ಲಾ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನಷ್ಟು ಯೋಜನೆಗಳನ್ನು ನೀಡುವವರಿದ್ದೇವೆ. ಈಗಾಗಲೇ ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ತಿಂಗಳು ೧೦೦ ಕೋಟಿ ರೂ.ನಷ್ಟು ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಎಲ್ಲಾ ಕಾರಣಗಳಿಂದಾಗಿ ಲೋಕಸಭಾ ಚುನಾವಣೆಗೆ ಜನರ ಮುಂದೆ ಹೋಗಲು ನಮಗೆ ಯಾವುದೇ ಮುಜುಗುರವಿಲ್ಲ. ನಮ್ಮ ಗ್ಯಾರಂಟಿ ಕಾರ್ಯಕ್ರಮ ತಲುಪಿದೆಯೇ ಎಂದು ಕೇಳಿ ಮತಯಾಚಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಎಲ್ಲರ ಪ್ರಯತ್ನದಿಂದಾಗಿ ಜಿಲ್ಲೆಯು ಸಂಘಟನೆ ವಿಚಾರದಲ್ಲಿ ರಾಜ್ಯದ ಗಮನ ಸೆಳೆದಿದೆ. ಲೋಕಸಭೆ ಚುನಾವಣೆ ಸಂಬಂಧ ಕೆಲವು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಸಭೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ೫ ಜನ ಶಾಸಕರು ಅತ್ಯಂತ ಕ್ರಿಯಾಶೀಲರಾಗಿ, ಕಾರ್ಯಕರ್ತರು, ಪಕ್ಷದೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಿಜೆಪಿ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರದ್ದಾಗಿದೆ. ಪರಿಷತ್ ಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳೂ ಸಹ ಬರುವುದಿದೆ. ಮತದಾರರ ವಿಶ್ವಾಸ ಗಳಿಸಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಡೂರು ಕ್ಷೇತ್ರವನ್ನು ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗಿಂತ ೨೦ ಸಾವಿರ ಮತಗಳನ್ನು ಹೆಚ್ಚಿಗೆ ಪಡೆದಿದ್ದೇವೆ. ಈ ಮುನ್ನಡೆಯನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ೧ ಲಕ್ಷಕ್ಕೆ ಏರಿಸುವ ಸಲುವಾಗಿ ಈ ನಿಮಿಷದಿಂದ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮುಖಂಡರುಗಳಾದ ಬಿ.ಎಲ್.ಶಂಕರ್, ಮೋಟಮ್ಮ, ಡಿ.ಕೆ.ತಾರಾದೇವಿ, ಬಿ.ಎಲ್.ರಾಮದಾಸ್, ಶಾಸಕರುಗಳಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಎಂ.ಸಿ.ಶಿವಾನಂದಸ್ವಾಮಿ, ಸಚಿನ್ಮೀಗಾ ಇತರರು ಭಾಗವಹಿಸಿದ್ದರು.
A grant of Rs 100 crore per month for each Assembly Constituency