ಚಿಕ್ಕಮಗಳೂರು: ಸರಕಾರಿ ಶಾಲೆ, ಅಂಗನವಾಡಿಗಳಲ್ಲಿ ಕಲಿಯುವರು ಬಹುತೇಕ ಬಡವರ ಮಕ್ಕಳೇ. ಅವರ ಕಲಿಕೆಗೆ ಸುಸಜ್ಜಿತ ಸೂರು ಒದಗಿಸಬೇಕು ಎಂಬ ಸದುದ್ದೇಶದಿಂದ ನಮ್ಮ ಸರಕಾರ ನಗರದ ಐದು ಅಂಗನವಾಡಿಗಳಿಗೆ ೧.೪೦ ಕೋಟಿ ರೂ.ಅನುದಾನ ನೀಡಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ೨೪ನೇ ವಾರ್ಡಿನ ಜ್ಯೋತಿ ನಗರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ೧ ಕೋಟಿ ೪೦ ಲಕ್ಷ ರೂ ವೆಚ್ಚದಲ್ಲಿ ನಗರದ ಜ್ಯೋತಿ ನಗರ, ಕಲ್ಯಾಣ ನಗರ, ಟಿಪ್ಪು ನಗರ, ಮತ್ತು ಶಾಂತಿ ನಗರದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಹಾಲು, ಮೊಟ್ಟೆ, ಊಟವನ್ನು ಸರ್ಕಾರ ನೀಡುತ್ತಿದೆ, ಅಂಗನವಾಡಿ ಕಟ್ಟಡಗಳು ಸುಸರ್ಜಿತವಾಗಿರಲಿ ಎಂಬ ಉದ್ದೇಶದಿಂದ ನೂತನ ಕಟ್ಟಡ ಚಾಲನೆ ಮತ್ತು ಉದ್ಘಾಟನೆಯನ್ನು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರು ಎಲ್ಲಾ ಧರ್ಮದ ಬಡವರು, ರೈತರು ಮತ್ತು ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ದಿನ ಬಳಕೆ ವಸ್ತುಗಳು, ಸಿಲಿಂಡರ್, ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ಮನೆ ನಿರ್ವಹಣೆ ಮಾಡಲು ಮಹಿಳೆಯರಿಗೆ ಕಷ್ಟವಾಗಬಾರದೆಂಬ ಉದ್ದೇಶದಿಂದ, ವಾರ್ಷಿಕ ಆದಾಯ ೮ ಲಕ್ಷ ಒಳಪಟ್ಟ ಕುಟುಂಬದ ಯಜಮಾನಿ ಮಹಿಳೆಗೆ ಗೃಹಲಕ್ಷ್ಮೀ ಯೋಜನೆ ನೀಡಲಾಗುತ್ತಿದ್ದು, ಇಡೀ ವಿಶ್ವದಲ್ಲಿಯೇ ಹೆಣ್ಣುಮಕ್ಕಳಿಗಾಗಿ ಒಂದು ವರ್ಷಕ್ಕೆ ೩೦ ಸಾವಿರದ ೬೦೦ ಕೋಟಿ ರೂಗಳ ೫ ಬೃಹತ್ ಯೋಜನೆಗಳನ್ನು ತಂದುಕೊಟ್ಟ ಮೊದಲಿಗರು ಎಂದರು.
ಬಡವರ ಬದುಕಿನ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗಳಲ್ಲಿ ಎರಡು ಎಕರೆ ಜಾಗ ಗುರುತಿಸಿ ನಿವೇಶನ ಮತ್ತು ಮನೆ ಇಲ್ಲದ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸೂಚನೆ ನೀಡಿದ್ದಾರೆ, ಸರ್ಕಾರವನ್ನು ಅಧಿಕಾರಕ್ಕೆ ತಂದ ರಾಜ್ಯದ ಜನರ ಋಣವನ್ನು ತೀರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಿರೋದ ಪಕ್ಷದ ಆರೋಪಗಳಿಗೆ ಉತ್ತರಿಸಿದ ಅವರು ರಾಜಕಾರಣ ಎಂದರೇ ಹರಿಯುವ ನೀರಿದಂತೆ, ಯಾವುದೇ ಪಕ್ಷ ಸತತವಾಗಿ ಶಾಶ್ವತ ಆಳ್ವಿಕೆ ನಡೆಸಿಲ್ಲ, ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ರೈತರಿಗಾಗಿ ಏನು ಮಾಡಿದ್ದಾರೆ, ಇಡೀ ರಾಜ್ಯದಲ್ಲಿ ಡ್ಯಾಮ್ ನಿರ್ಮಿಸಿ ರೈತರಿಗಾಗಿ ನೀರಾವರಿ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ, ೨೦೦೪ ರಿಂದ ೧೯ ವರ್ಷ ಅಧಿಕಾರದಲ್ಲಿದ್ದು, ಅಂದು ಮತ್ತು ಇಂದಿಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಏನು ಬದಲಾವಣೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್, ಸದಸ್ಯರಾದ ಗುರುಮಲ್ಲಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾ ರೇಖಾಹುಲಿಯಪ್ಪಗೌಡ, ಮಂಜೇಗೌಡ್ರು, ಮಲ್ಲಿಕಾರ್ಜುನ್, ಪುನೀತ್, ಸೂರ್ಯ, ಕುಮಾರಣ್ಣ, ಸ್ಥಳಿಯರಾದ ಮಂಜುನಾಥ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.
Foundation stone laying for Anganwadi Center at Jyoti Nagar 24th Ward of the city