ಕೊಪ್ಪ : ದುಷ್ಟ ವ್ಯಸನದಿಂದ ಕುಟುಂಬ, ಸಮಾಜ, ದೇಶ ನಾಶವಾಗುತ್ತದೆ. ಧರ್ಮಸ್ಥಳ ಯೋಜನೆಯ ಮೂಲಕ ನಡೆಸುತ್ತಿರುವ ಮದ್ಯವರ್ಜನ ಶಿಬಿರದಿಂದಾಗಿ ಅನೇಕ ಮಂದಿ ದುರ್ವ್ಯನದಿಂದ ದೂರವಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ದುಶ್ಚಟದಿಂದ ದೂರವಾದರೆ ಕುಟುಂಬದಲ್ಲಿ ಸಾಮರಸ್ಯ ಸಾಧ್ಯವಾಗುತ್ತದೆ ಎಂದು ಕೊಪ್ಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಎಂ. ಅನಿಲ್ ಕುಮಾರ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಾಳಗಡಿಯ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಸ್ಮ್ರತಿ ಮತ್ತು ವ್ಯಸನ ಮುಕ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮದ್ಯವ್ಯಸನದಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ನಮ್ಮ ಕಾರ್ಯವ್ಯಾಪ್ತಿಯಲ್ಲಿ ಪ್ರತಿವಾರ ಮದ್ಯವ್ಯಸನದಿಂದ ಸಾವನ್ನಪ್ಪಿದ ೨ ಪ್ರಕರಣಗಳು ದಾಖಲಾಗುತ್ತವೆ. ಪೊಲೀಸ್ ಇಲಾಖೆಯಲ್ಲೂ ಕೆಲವು ಮಂದಿ ವ್ಯಸನಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ವ್ಯಸನಮುಕ್ತರನ್ನಾಗಿ ಮಾಡಬೇಕಿದೆ. ತ್ಯಾಗ ಮನೋಭಾವದಿಂದ ದುಶ್ಚಟದಿಂದ ದೂರವಾಗಬಹುದು. ಮನಪರಿವರ್ತನೆಯ ಮೂಲಕ ಮದ್ಯಮುಕ್ತರನ್ನಾಗಿ ಮಾಡುತ್ತಿರುವ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು.
ಯೋಜನಾಧಿಕಾರಿ ನಿರಂಜನ್ ಮಾತನಾಡಿ ಜನಜಾಗೃತಿ ವೇದಿಕೆಯ ಮೂಲಕ ಕೊಪ್ಪ ಯೋಜನಾವ್ಯಾಪ್ತಿಯಲ್ಲಿ ಕಳೆದ ೧೫ ವರ್ಷಗಳಿಂದ ೧೦ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿದ್ದು ೫೮೦ಕ್ಕೂ ಹೆಚ್ಚು ಮಂದಿ ವ್ಯಸನ ಮುಕ್ತರಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರ ದುಶ್ಚಟ ಮುಕ್ತ ಸಮಾಜದ ಕನಸನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾರ್ಥಕಗೊಳಿಸುತ್ತಿದ್ದಾರೆ ಎಂದರು.
ನವಜೀವನ ಸಮಿತಿಯ ಸದಸ್ಯರಾದ ಉಮೇಶ್ರವರು ತಮ್ಮ ಅನಿಸಿಕೆ ಹಂಚಿಕೊಂಡು ಬೀದಿ ಪಾಲಾಗಬೇಕಿದ್ದ ನಮ್ಮ ಕುಟುಂಬ ಇಂದು ದೇವಸ್ಥಾನವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರವಿಂದ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಉಪತಹಶೀಲ್ದಾರ್ ಶಿವರಾಂ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದದರು. ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ರಾವ್, ಜನಜಾಗೃತಿ ವೇದಿಕೆಯ ಸದಸ್ಯರಾದ ರಾಘವೇಂದ್ರ ಭಟ್, ಎಚ್.ಎಸ್. ಬಾಲಕೃಷ್ಣ, ಭಾಗ್ಯ ನಂಜುಂಡಸ್ವಾಮಿ, ದೇವಪ್ಪ ಸಿಗದಾಳು, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಉಪಾಧ್ಯಕ್ಷ ಬಿನು ತೋಮಸ್, ಯೋಜನೆಯ ಮೇಲ್ವಿಚಾರಕರಾದ ಸುಧೀರ್, ರವಿ, ನವಜೀವನ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಆಪತ್ತು ನಿರ್ವಹಣ ತಂಡದ ಸದಸ್ಯ ದೇವೇಂದ್ರ ಮುಂತಾದವರು ಉಪಸ್ಥಿತರಿದ್ದರು.
Gandhi Smriti and Addiction Free Conference