ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಸದ್ಯಕ್ಕೆ ಕಡಿವಾಣ ಬೀಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಪದೇ ಪದೇ ಕಾಡಾನೆ ಗಳು ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದ ಚಿಕ್ಕಮಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಾಫಿತೋಟದಲ್ಲಿ ಕಾಡಾನೆ ಗಳ ಹಿಂಡು ಕಾಣಿಸಿಕೊಂಡಿದ್ದು, ಇಲ್ಲಿನ ಕಾಫಿ ಬೆಳೆಗಾರರು ಮತ್ತು ರೈತರಲ್ಲಿ ಆತಂಕ ಹೆಚ್ಚಿಸಿದೆ. ಆನೆಗಳು ಕಾಫಿತೋಟ, ಅಡಿಕೆ ತೋಟಗಳಿಗೆ ದಾಳಿ ಇಟ್ಟು ಬೆಳೆನಾಶ ಮಾಡುತ್ತಿದ್ದು, ಲಕ್ಷಾಂತರ ರೂ.ನಷ್ಟ ಅನುಬವಿಸುತ್ತಿದ್ದಾರೆ.
ಕಣತಿ ಗ್ರಾಮದ ಸಮೀಪದಲ್ಲಿನ ಕಾಫಿತೋಟದಲ್ಲಿ ಮರಿ ಆನೆ ಸೇರಿದಂತೆ ಏಳು ಆನೆಗಳು ಬೀಡು ಬಿಟ್ಟಿದ್ದು, ಕಾಡಾನೆಗಳು ಕಾಫಿ ತೋಟದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮಾರದಲ್ಲಿ ಸೆರೆ ಹಿಡಿದಿದ್ದಾರೆ. ಕಾಡಾನೆಗಳ ಉಪಟಳದಿಂದ ಕಾರ್ಮಿಕರು ಕಾಫಿತೋಟಗಳಿಗೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಬಿಸಿಲಿಗೆ ಸುಡು ತ್ತಿದೆ. ಸರ್ಕಾರ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಈ ನಡುವೆ ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆ ಕಾಡಾನೆಗಳ ಪಾಲಾಗುತ್ತಿದೆ. ಪ್ರತಿನಿತ್ಯ ಕಾಡಾನೆಗಳ ಉಪಟಳದಿಂದ ಜನರು ಬೇಸತ್ತು ಹೋಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗಿದ್ದು, ಮಾನವ ಮತ್ತು ಪ್ರಾಣಿ ಸಂಘರ್ಷ ಜಾಸ್ತಿಯಾಗುತ್ತಿದೆ. ಸರ್ಕಾರ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು. ಹಿಂಡು ಹಿಂಡಾಗಿ ಅಡಿಕೆ, ಕಾಫಿತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ತಕ್ಷಣವೇ ಅರಣ್ಯ ಪ್ರದೇಶಕ್ಕೆ ಅಡ್ಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
A herd of wildebeests on the Chikkamagaluru-Sringeri national highway in Kanathi village