ಚಿಕ್ಕಮಗಳೂರು: ಕ್ಷೇತ್ರದ ಸರ್ವೋತಮುಖ ವಿವಿಧ ಯೋಜನೆಗಳಡಿ ೪ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಆಗಿದ್ದು ಅಭಿವೃದ್ದಿಗೆ ಪೂರಕವಾಗಿ ಶ್ರಮಿಸುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ಅವರು ಶಿರವಾಸೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಹಾಗೂ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರನ್ನು ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಬಹಳ ಸಮಸ್ಯೆಯಾಗಿದ್ದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಇಂದು ಒಂದು ಹಂತದ ವಿದ್ಯುತ್ ಸಮಸ್ಯೆ ಗ್ರಾಮದಲ್ಲಿ ಬಗೆಹರಿದಿದೆ ಎಂದು ಹೇಳಿದರು.
ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸಲು ಮಲ್ಲಂದೂರಿನಲ್ಲಿ ಎಂ.ಯು. ಸ್ಟೇಷನ್ ಪ್ರಾರಂಭ ಮಾಡಲು ಜಾಗದ ಸಮಸ್ಯೆ ಇದ್ದು ಜಾಗದವರಿಗೆ ಪರಿಹಾರ ನೀಡಿ ಭೂಸ್ವಾಧೀನ ಪಡಿಸಿಕೊಳ್ಳಲು ನಿರ್ಧಾರ ಕೈಗೊಂಡಿದ್ದು ಸಧ್ಯದಲ್ಲೆ ಕಾಮಗಾರಿ ಪ್ರಾರಂಭವಾಗಲಿದ್ದು ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ತಿಳಿಸಿದರು.
ನುಡಿದಂತೆ ನೆಡೆದ ಸರ್ಕಾರ ಬಂದು ೧೦೦ ದಿನದಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ೫ ಗ್ಯಾರಂಟಿಗಳಲ್ಲಿ ೪ ಅನ್ನು ಅನುಷ್ಠಾನಕ್ಕೆ ತರಲಾಗಿದೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಈ ಭಾಗದ ರಸ್ತೆ ಕಾಮಗಾರಿಗಳಿಗೆ ೨೦ ಲಕ್ಷ ರೂ. ಗಳನ್ನು ಮಂಜೂರು ಮಾಡಲಾಗಿದೆ ಜೊತೆಗೆ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರವಾಸೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮಾಕ್ಷಿ, ಉಪಾಧ್ಯಕ್ಷ ರಘು, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
Installation of MLA HD Tammayya Shanku for various development works in Shiravase village