ಚಿಕ್ಕಮಗಳೂರು: ಅಕ್ಟೋಬ್ ೩ ರಿಂದ ಮುಂದಿನ ತಿಂಗಳು ೧೨ ರ ವರೆಗೆ ನಗರಸಭೆ ವತಿಯಿಂದ ವಿಶೇಷ ಕಂದಾಯ ವಸೂಲಾತಿ ಆಂದೋಲನ ಮಾಡಲಾಗುತ್ತಿದೆ. ಸಾರ್ವಜನಿಕರು ತೆರಿಗೆ ಕಟ್ಟಿ ಸಹಕರಿಸಬೇಕು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮನವಿ ಮಾಡಿದರು.
ಅವರು ಮಂಗಳವಾರ ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಕಂದಾಯ ವಸೂಲಾತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೂರು ವಿಭಾಗದಲ್ಲಿ ೩ ತಂಡ ಮಾಡಲಾಗಿದೆ. ಎಲ್ಲಾ ೩೫ ವಾರ್ಡ್ಗಳಲ್ಲಿ ಪ್ರತಿ ಮನೆ ಮನೆಗೆ ಭೇಟಿ ಮಾಡುತ್ತೇವೆ. ಮನೆ ಬಳಿ ತೆರಳಿ ತಮಟೆ ಬಾರಿಸಲಾಗುತ್ತದೆ. ನಂತರ ಮನೆ, ಮಳಿಗೆ, ವಾಣಿಜ್ಯ ತೆರಿಗೆಗಳನ್ನು ಮುಂದಿನ ತಿಂಗಳು ೧೨ ರೊಳಗಾಗಿ ಕಟ್ಟುವಂತೆ ಮನವಿ ಮಾಡಲಾಗುತ್ತಿದೆ ಎಂದರು.
ಆಯಾ ವಾರ್ಡ್ಗಳಲ್ಲಿ ಕ್ಯಾಂಪ್ಗಳನ್ನು ಮಾಡಿ ಸ್ಥಳದಲ್ಲೇ ನೀರು, ಮನೆ ಕಂದಾಯಗಳನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಸ್ಥಳದಲ್ಲಿ ಕಟ್ಟಲು ಸಾಧ್ಯವಾಗದಿರುವರು ಮುಂದಿನ ೧೨ ರೊಳಗಾಗಿ ನಗರಭೆಗೆ ಬಂದು ತೆರಿಗೆ ಕಟ್ಟಬಹುದು ಎಂದು ತಿಳಿಸಿದರು.
ಮುಂದಿನ ತಿಂಗಳು ೧೨ ರೊಳಗೆ ತೆರಿಗೆ ಭರಿಸದೆ ಇದ್ದಲ್ಲಿ ೯ ತಂಡಗಳು ಪ್ರತಿ ವಾರ್ಡ್ನ ಮನೆ ಮನೆಗೆ ತೆರಳಿ ತೆರಿಗೆ ಕಟ್ಟದಿರುವ ಮನೆಗಳ ನಲ್ಲಿ ಸಂಪರ್ಕ, ಯುಜಿಡಿ, ವಿದ್ಯುತ್ ಸೌಲಬ್ಯಗಳನ್ನು ಕಡಿತಗೊಳಿಸಲಾಗುವುದು. ಜೊತೆ ಆಸ್ತಿ ಜಪ್ತಿಯನ್ನೂ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಇದಕ್ಕೆ ಆಸ್ಪದ ಕೊಡದೆ ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟಿ ನಗರಸಭೆ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.
ವರ್ತಕರು ಸಹ ಎರಡರಿಂದ ಮೂರು ವರ್ಷಗಳಿಂದ ತೆರಿಗೆ ನಿಲ್ಲಿಸಿದ್ದಾರೆ. ಇನ್ನೂ ಕೆಲವರು ನಗರಸಭೆಯಿಂದ ಅನುಮತಿ ಪಡೆಯದೆ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಅಂತಹ ವರು ತಾವಾಗೇ ಬಂದು ನಗರಸಭೆಯಿಂದ ಪರವಾನಗಿ ಪಡೆಯಬೇಕು. ಪರವಾನಗಿ ಪಡೆದವರು ತೆರಿಗೆ ಕಟ್ಟಿ ನವೀಕರಿಸಿಕೊಳ್ಳದಿದ್ದಲ್ಲಿ. ಅಂಗಡಿಗಳಿಗೆ ಬೀಗ ಮುದ್ರೆ ಹಾಕಬೇಕಾಗುತ್ತದೆ ಎಂದರು.
ಇದರ ಜೊತೆಗೆ ಶೇ.೧೦೦ ರಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಸಾರ್ವಜನಿಕರು ಈ ವಿಚಾರದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ತೆರಿಗೆ ಕಟ್ಟಲು ಜನರಿಗೆ ಅನುಕೂಲ ಆಗಬೇಕು ಎನ್ನುವ ದೃಷ್ಠಿಯಿಂದ ಗೂಗಲ್ ಪೇ, ಫೋನ್ ಪೇ ಗಳಲ್ಲೂ ತೆರಿಗೆ ಕಟ್ಟುವ ವ್ಯವಸ್ಥೆ ಮಾಡಲಾಗಿದೆ. ನಗರಸಭೆಯಲ್ಲೂ ಬ್ಯಾಂಕ್ ಶಾಖೆ ತೆರೆದಿದ್ದು, ಅಲ್ಲಿಯೂ ಸಹ ತೆರಿಗೆ ಕಟ್ಟಬಹುದು ಎಂದು ತಿಳಿಸಿದರು.
ನೀರಿನ ತೆರಿಗೆ ೫ ಕೋಟಿ, ಆಸ್ತಿ ತೆರಿಗೆ ಸುಮಾರು ೭ ಕೋಟಿ ರೂ., ನಗರಸಭೆ ಮಳಿಗೆ ಬಾಡಿಗೆ ಸುಮಾರು ೩ ಕೋಟಿ ರೂ. ಮತ್ತು ಉದ್ದಿಮೆ ನಡೆಸುತ್ತಿರುವವರದ್ದು ಸುಮಾರು ೧.೫ ಕೋಟಿ ರೂ. ಸೇರಿ ಸುಮಾರು ೧೫ ಕೋಟಿ ರೂ. ವರೆಗೆ ತೆರಿಗೆ ಬಾಕಿ ಇದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಕಂದಾಯ ಅಧಿಕಾರಿ ರಮೇಶ್ನಾಯ್ಡ್, ಪರಿಸರ ಅಭಿಯಂತರರು ತೇಜಸ್ವಿನಿ, ರಾಜಸ್ವ ನಿರೀಕ್ಷಕರಾದ ಶಿವಾನಂದ್, ಕರ ವಸೂಲಿಗಾಗರಾದ ವಿನೋದ್ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Special Revenue Collection Movement by Municipal Council