ಚಿಕ್ಕಮಗಳೂರು: ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ ೬ ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮವನ್ನು ಅ.೧೩ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹೂವಾಡಿಗರ ಸಂಘದ ಅಧ್ಯಕ್ಷ ರಘು ತಿಳಿಸಿದರು.
ಬೆಳಗ್ಗೆ ೯.೩೦ ಕ್ಕೆ ಪುಷ್ಪಾಲಂಕೃತ ವಾಹನದಲ್ಲಿ ಶ್ರೀ ಶರಣ ಗುರು ಹೂವಾಡಿಗ ಮಾದಣ್ಣನವರ ಭಾವಚಿತ್ರದ ಮೆರವಣಿಗೆ ತಾಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾತಂಡದೊಂದಿಗೆ ಹೊರಡಲಿದೆ. ೧೧.೩೦ ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು ,ನದಿಸಿನ್ನೂರ ಶರಣ ಹೂಗಾರ ಮಾದಯ್ಯನವರ ಮಹಾಶಕ್ತಿ ಪೀಠದ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ಸಾನಿಧ್ಯ ವಹಿಸಲಿದ್ದಾರೆ.
ಅತಿಥಿಗಳಾಗಿ ಬಸವರಾಜು ಹೂಗಾರ, ಅಶೋಕ ಹೂಗಾರ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಎಂಎಲ್ಸಿ ಗಾಯತ್ರಿಶಾಂತೇಗೌಡ, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಶ್ರೀಗಳಿಂದ ಪ್ರವಚನ ನಡೆಯಲಿದೆ. ನಂತರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದರು.
ಜಿಲ್ಲಾಧ್ಯಕ್ಷ ಆನಂದ ಮಾತನಾಡಿ, ಹಿಂದಿನ ಸರಕಾರ ಹೂವಾಡಿಗರ ನಿಗಮ ಮಂಡಳಿ ಸ್ಥಾಪಿಸಿತ್ತು. ಈಗಿನ ಸರ್ಕಾರ ಅದನ್ನು ಅನುಷ್ಟಾನಕ್ಕೆ ತರಬೇಕು ಎಂದು ಒತ್ತಾಯಿಸಿದ ಅವರು ಸರಕಾರದಿಂದಲೇ ಶರಣ ಹೂವಾಡಿಗ ಮಾದಣ್ಣನ ಜಯಂತಿ ಆಚರಿಸುವಂತಾಗಬೇಕು ಎಂದು ಆಗ್ರಹಿಸಿದರು. ಸಂಘದ ಪದಾಕಾರಿಗಳಾದ ಶಂಭುಲಿಂಗಪ್ಪ, ಮಂಜುನಾಥ, ವಿನಯ್ ಮತ್ತಿತರರಿದ್ದರು.
6th year Jayanthotsav of Shri Guru Sharan Hoovadiga Madanna