ಚಿಕ್ಕಮಗಳೂರು : ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ವಿರೂಪಗೊಳಿಸಿರು ದುಷ್ಕರ್ಮಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿ ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಒತ್ತಾಯಿಸಿದರು.
ಈ ಕುರಿತು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಶ್ರೀಗಳು, ಹಲಕರ್ಟಿಯಲ್ಲಿ ನಡೆದಿರುವ ಕೃತ್ಯ ನಾಡಿನೆಲ್ಲೆಡೆಯ ಬಸವಾಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಸಮಾಜದ, ಸರ್ವಜನಾಂಗದ ಏಳಿಗೆಗಾಗಿ ಶ್ರಮಿಸಿ ಭಾರತೀಯ ಸಾಂಸ್ಕೃತಿಕ ವಲಯದ ಚಲನಶೀಲ ಶಕ್ತಿಯಾಗಿರುವ ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿರುವುದು ವಿಕೃತ ಮನಸ್ಸಿನವರ ಕೃತ್ಯವೇ ಆಗಿದೆ. ಪ್ರಗತಿ, ಸಮಾನತೆ, ಸರ್ವೋದಯದ ಆಶಯಗಳ ಮೂರ್ತ ರೂಪವಾದ ಬಸವಣ್ಣನವರ ಭಾವಚಿತ್ರಕ್ಕೆ ಮಾಡಿರುವ ವಿರೂಪ ಸಮಾಜದ ನೈತಿಕ ಮೌಲ್ಯಗಳನನ್ನು ವಿರೂಪಗೊಳಿಸಿದಷ್ಟೇ ಪಾಪಕೃತ್ಯಕ್ಕೆ ಸಮಾನವಾಗಿದೆ ಎಂಬುದು ನಮ್ಮ ಭಾವನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂದಿನ ರಾಜ ಪ್ರಭುತ್ವದ ಕಾಲಘಟ್ಟದಲ್ಲಿ ಜಗತ್ತಿಗೆ ಪ್ರಜಾಪ್ರಭುತ್ವದ ಮಾದರಿಯನ್ನು ಅನುಭವ ಮಂಟಪದ ಮೂಲಕ ಪರಿಚಯಿಸಿದ ಬಸವವಣ್ಣನವರ ಆಶಯಗಳನ್ನು ಅನುಷ್ಠಾನ ಮಾಡುವವರಿಗೆ ಇಂತಹ ಕೃತ್ಯಗಳು ಮನಸ್ಸು ನೋಯಿಸುತ್ತವೆ. ಹೀಗಾಗಿ ಸರ್ಕಾರ ಆದಷ್ಟು ತುರ್ತಾಗಿ ಈ ಕೃತ್ಯ ಎಸಗಿರುವ ವಿಕೃತರನ್ನು ಬಂಧಿಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ ಶಿವಶಂಕರ್, ವೀರಶೈವ ಬ್ಯಾಂಕ್ ಅಧ್ಯಕ್ಷ ಜಿ.ಎಂ ರಾಜಶೇಖರ್, ಉದ್ಯಮಿ ಬಿ.ಎನ್ ಚಿದಾನಂದ್, ಬಾಣೂರು ಚನ್ನಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ರೈತ ಮುಖಂಡ ಗುರುಶಾಂತಪ್ಪ, ಸಿರಿಮನೆ ಪ್ರಸಾದ್, ಸಿ.ಬಿ ನಂದೀಶ್, ಸಿ.ಎಂ ಹರಪ್ರಸಾದ್, ಬಸವತತ್ತ್ವ ಪೀಠದ ಟ್ರಸ್ಟಿಗಳಾದ ಸಿ.ಪಿ ವಿಜಯಕುಮಾರ್, ಸಿ.ಎಸ್ ಸದಾಶಿವಪ್ಪ, ಜಗದೀಶ್, ಪೃಥ್ವಿ ಹಳೇಬೀಡು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Appeal demanding the arrest of the miscreants who defaced Basavanna’s portrait