ಚಿಕ್ಕಮಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಾಯೋಜಕತ್ವದೊಂದಿಗೆ, ಯುಪಿಎಸ್ಸಿ ಪರೀಕ್ಷೆ ಬರೆಯುವ ಹಂಬಲದಲ್ಲಿ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ಬಿ.ಎ ವ್ಯಾಸಂಗ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಬಡ ವಿದ್ಯಾರ್ಥಿ ಎಚ್.ಎಂ.ಸಂತೋಷ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಯುನಿವರ್ಸಲ್ ಸಂಸ್ಥೆಯ ಹತ್ತಾರು ವಿದ್ಯಾರ್ಥಿಗಳು ಪ್ರತಿ ವರ್ಷ ರ್ಯಾಂಕ್ ಗಳಿಸುತ್ತಲೇ ಬಂದಿದ್ದು, ಈ ಬಾರಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವ ಮೂಲಕ ಪ್ರಾಯೋಜಕತ್ವ ವಹಿಸಿದ ಪಾಲಿಕೆಗೂ ಕೀರ್ತಿ ತಂದಿದ್ದಾರೆ.
ನಾನು ಈಗ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವ ವಹಿಸಿರುವ ಬಿಬಿಎಂಪಿಯ ನೆರವನ್ನು ಮರೆಯಲು ಸಾಧ್ಯವಿಲ್ಲ. ಜತೆಗೆ ಅತ್ಯುತ್ತಮ ಕೋಚಿಂಗ್ ನೀಡುವ ಮೂಲಕ ಯುನಿವರ್ಸಲ್ ಸಂಸ್ಥೆ ನನ್ನಂತಹವರ ಯುಪಿಎಸ್ಸಿ ಕನಸು ನನಸು ಮಾಡುತ್ತಿರುವುದು ಸಹ ಸ್ಮರಣೀಯ’ ಎಂದು ಸಂತೋಷ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಬಿಬಿಎಂಪಿ ಶ್ಲಾಘನೀಯ ಸೇವೆ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವ ವಹಿಸುವ ಮೂಲಕ ಬಿಬಿಎಂಪಿ ಮಹತ್ವದ ಕೆಲಸ ಮಾಡುತ್ತಿದ್ದು, ಅದರ ಫಲವಾಗಿ ಚಿಕ್ಕಮಗಳೂರು ತಾಲ್ಲೂಕಿನ ಹರಿಹರದಹಳ್ಳಿಯಂತಹ ಗ್ರಾಮೀಣ ಪ್ರದೇಶಗಳಿಂದ ಬಂದ ಸಂತೋಷ್ ಅವರಂತಹ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿದೆ. ಅವರ ಯುಪಿಎಸ್ಸಿ ಕನಸನ್ನು ನನಸು ಮಾಡಲು ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಆರ್.ಉಪೇಂದ್ರ ಶೆಟ್ಟಿ ಅವರು ಸಹ ಪ್ರೇರಕ ಶಕ್ತಿಯಾಗಿದ್ದಾರೆ.
ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ನ 2022ನೇ ಸಾಲಿನ ಬಿ.ಎ.ವಿದ್ಯಾರ್ಥಿಯಾಗಿರುವ ಸಂತೋಷ್ ಮೊದಲ ರ್ಯಾಂಕ್ ಪಡೆದರೆ, ಅವರೊಂದಿಗೆ ಕೀರ್ತನಾ ಎಸ್ ಮೂರನೇ ರ್ಯಾಂಕ್, ರಾಹುಲ್ ಆರ್ ಮೇಟಿ ನಾಲ್ಕನೇ ರ್ಯಾಂಕ್, ವಿಶ್ವನಾಥ್ ಬಸವರಾಜ್ ರಾಚ್ಯ ಐದನೇ ರ್ಯಾಂಕ್, ಪಿ ಸೌಮ್ಯ ಆರನೇ ರ್ಯಾಂಕ್, ಸಂಗೀತಾ ರಾಥೋಡ್ ಏಳನೇ ರ್ಯಾಂಕ್, ರಕ್ಷಿತಾ ದಾಸ್ ಎಸ್ ಎಂಟನೇ ರ್ಯಾಂಕ್ ಮತ್ತು ತೌಸಿಫ್ ಅಹ್ಮದ್ ಸಹ ರ್ಯಾಂಕ್ ಗಳಿಸಿದ್ದಾರೆ. 2021ನೇ ಸಾಲಿನ ವಿದ್ಯಾರ್ಥಿಗಳಾದ ಅನೀಜ್ ಫಾತಿಮ, ಕಾವೇರಿ, ಅಭಿಲಾಷ್ ಅವರು ಸಹ ರ್ಯಾಂಕ್ ಗಳಿಸಿದ್ದಾರೆ.
Bangalore University Convocation First Rank for Chikmagalur Student