ಚಿಕ್ಕಮಗಳೂರು: ರಾಮ ಭಕ್ತರಿಗೆ ಅಪಮಾನ ಮಾಡುವ ದುರುದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಅಯೋಧ್ಯೆಯ ಕರಸೇವಕರನ್ನೆಲ್ಲಾ ಬಂಧಿಸುವುದು ಈ ಸರ್ಕಾರದ ನೀತಿಯಾಗಿದ್ದರೆ, ನಾನೂ ಕೂಡ ಕರ ಸೇವೆಯಲ್ಲಿ ಭಾಗಿಯಾದವನು. ಹಾಗಾಗಿ ನನ್ನನ್ನೂ ಬಂಧಿಸಿ ಎಂದು ಧರಣಿ ನಡೆಸುತ್ತಿದ್ದೇನೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು.
ನಗರ ಠಾಣೆ ಎದುರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಎಂಬ ಶ್ರೀರಾಮ ಭಕ್ತ, ಕರಸೇವಕನನ್ನ ೩೧ ವರ್ಷಗಳ ನಂತರ ಹಳೇ ಕೇಸ್ ನೆಪದಲ್ಲಿ ಬಂಧಿಸಿರುವುದರಲ್ಲಿ ರಾಜ್ಯ ಸರ್ಕಾರದ ದುರುದ್ದೇಶ ಇದೆ. ಮಂದಿರ ನಿರ್ಮಾಣದ ಕಾರ್ಯ ಮುಗಿಯುವ ಹಂತಕ್ಕೆ ಬಂದಿರುವುದು ನಮಗೆ ಜೀವನದ ಆನಂದದ ಸಂಗತಿ. ಇಂತಹ ಸಂದರ್ಭದಲ್ಲಿ ಕರ ಸೇವಕರನ್ನು ಬಂಧಿಸುತ್ತಿರುವುದು ಸರಿಯಲ್ಲ ಎಂದರು.
ಶ್ರೀಕಾಂತ್ ಪೂಜಾರಿ ದೇಶಬಿಟ್ಟು ಹೋಗಿರಲಿಲ್ಲ. ಅವರ ಮೇಲೆ ಪ್ರಕರಣ ದಾಖಲಾಗಿರುವುದು ಸಹ ಅವರಿಗೆ ಗೊತ್ತಿರಲಿಲ್ಲ. ಅವರು ಹುಬ್ಬಳ್ಳಿಯಲ್ಲೇ ಇದ್ದರು. ದೇಶ ಬಿಟ್ಟು ಹೋದವರಾಗಿದ್ದರೆ ಬಂದ ಕೂಡಲೇ ಬಂದಿಸಿದ್ದೇವೆ ಎಂದು ಹೇಳಬಹುದಾಗಿತ್ತು ಎಂದರು.
ಅಯೋಧ್ಯೆ ಮಂದಿರ ನಿರ್ಮಾಣ ಅಂತಿಮ ಕ್ಷಣದಲ್ಲಿ ಉದ್ಘಾಟನೆಗೆ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ತಲುಪುತ್ತಿರುವ ಸಂದರ್ಭದಲ್ಲಿ ರಾಮ ಭಕ್ತ ಕರಸೇವಕನನ್ನು ಬಂಧಿಸಿರುವ ಹಿನ್ನೆಲೆ ದುರುದ್ದೇಶದ್ದು ಅನ್ನಿಸಿದೆ. ಹೀಗಾಗಿ ರಾಮ ಕರ ಸೇವಕನನ್ನು ಬಂಧಿಸುವುದಾದರೆ ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂದು ಹೇಳಿ ಠಾಣೆಗೆ ಬಂದಿದ್ದೇನೆ ಎಂದರು.
ನಾವು ಪ್ರಭು ಶ್ರೀರಾಮ, ರಾಮ ಭಕ್ತರ ಪರವಾಗಿ ಇಲ್ಲ ಎನ್ನುವ ಸಂದೇಶ ಕೊಡಲು ಸರ್ಕಾರ ಹೊರಟಿದೆ. ಅದಕ್ಕಾಗಿ ಶ್ರೀಕಾಂತ್ ಪೂಜಾರಿಯನ್ನ ಬಂಧಿಸಿದೆ ಎಂದು ದೂರಿದರು.
The state government has the malicious intention of insulting the Ram devotees