ಚಿಕ್ಕಮಗಳೂರು: ವಿದ್ಯಾರ್ಥಿಗಳು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಶಿಕ್ಷಕರು ಅಥವಾ ಉಪನ್ಯಾಸಕರಾಗಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮನವಿ ಮಾಡಿದರು.
ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಹ ಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಬಹುತೇಕ ಯೂನಿವರ್ಸಿಟಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದೆ ನೀವೇನಾಗುತ್ತೀರೆಂದು ಪ್ರಶ್ನಿಸಿದ್ದೇನೆ. ಆ ಎಲ್ಲಾ ವಿದ್ಯಾರ್ಥಿಗಳೂ ನಾವು ಇಂಜಿನಿಯರ್, ಡಾಕ್ಟರ್, ಉನ್ನತ ಅಧಿಕಾರಿಗಳಾಗುತ್ತೇವೆ ಎಂದಿದ್ದಾರೆ. ಅವರಲ್ಲಿ ಒಬ್ಬರೂ ಸಹ ನಾನು ಶಿಕ್ಷಕ ನಾಗುತ್ತೇನೆ ಅಥವಾ ಉಪನ್ಯಾಸಕನಾಗುತ್ತೇನೆ ಎಂದು ಹೇಳಿಲ್ಲ ಎಂದು ವಿಷಾದಿಸಿದರು.
ಇಂದಿನ ಪೀಳಿಗೆ ಉಪನ್ಯಾಸಕರಾಗಲು, ಶಿಕ್ಷಕರಾಗಲು ಮುಂದೆ ಬಾರದಿರುವುದರಿಂದಾಗಿ ಇಂದು ಭಾರತ ಮಾತ್ರವಲ್ಲ. ಇಡೀ ಪ್ರಪಂಚ ಶಿಕ್ಷಕರು, ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿದೆ ಎಂದ ಅವರು, ಎಲ್ಲರೂ ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳಾದರೆ ಮುಂದೆ ನಿಮ್ಮ ಮಕ್ಕಳಿಗೆ ವಿದ್ಯೆ ಹೇಳಿಕೊಡುವವರು ಯಾರು, ಶಿಕ್ಷಕರಿಲ್ಲದೆ ಮಕ್ಕಳು ವಿದ್ಯಾವಂತರಾಗದಿದ್ದರೆ ದೇಶದ ಭವಿಷ್ಯದ ಗತಿ ಏನು ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ಕನ್ನಡದ ಗೀತೆಗಳನ್ನು ಮತ್ತು ಜೈಮಿನಿ ಭಾರತದ ಪದ್ಯವನ್ನು ಹಾಡುವ ಮೂಲಕ ವಿದ್ಯಾರ್ಥಿ ಗಳನ್ನು ರಂಜಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ, ಕಾಲೇಜಿಗೆ ಶೌಚಾಲಯ, ಮೈದಾನಕ್ಕೆ ಇಂಟರ್ಲಾಕ್, ಸ್ಮಾರ್ಟ್ ಕ್ಲಾಸ್ ಮತ್ತು ರಂಗಮಂದಿರವನ್ನು ನಿರ್ಮಿಸಿ ಕೊಡುವಂತೆ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಮಕ್ಕಳಲ್ಲಿ ಹಣ ಮತ್ತು ವಿದ್ಯೆ ಇದ್ದರೆ ಸಾಲದು ಅವರಲ್ಲಿ ಉತ್ತಮ ಗುಣ, ಒಳ್ಳೆಯ ನಡತೆ ಮತ್ತು ಸಂಸ್ಕಾರವಿರಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿಗೆ ರಂಗಮಂದಿರ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾ ಗುವುದು ಎಂದು ಭರವಸೆ ನೀಡಿದರು.
ಉಪನ್ಯಾಸಕಿ ಲೋಲಾಕ್ಷಿ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃ ತಿಕ ಕಾರ್ಯಕ್ರಮ ಜರುಗಿತು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಾನಾಯ್ಕ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ವ್ಯವಸ್ಥಾಪಕ ಅನಿಲ್ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಫೀಕ್ ಅಹಮದ್, ಸದಸ್ಯರಾದ ಸೀತಾರಾಮನ್, ಮುರುಗೇಶ್, ರೇಣುಕಾ ವರ್ಣ, ಮಾಜಿ ಅಧ್ಯಕ್ಷ ವೆಂಕಟೇಶ್ ಪೈ, ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಭರತ್, ಉಪನ್ಯಾಸಕರಾದ ತ್ಯಾಗರಾಜ್, ಮಂಜುನಾಥ್, ಕವಿತಾ ಉಪಸ್ಥಿತರಿದ್ದರು.
Govt Undergraduate College