ಚಿಕ್ಕಮಗಳೂರು: ಸಾಂಪ್ರದಾಯಕ ಪರಂಪರೆ ಸಂಸ್ಕೃತಿ ಉಳಿವಿಗೆ ಶ್ರೀರಂಭಾಪುರಿ ಜಗದ್ಗುರುಗಳವರ ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ರಾಜ್ಯಖಾತೆ ಸಚಿವೆ ಶೋಭಾಕರಂದ್ಲಾಜೆ ಅಭಿಪ್ರಾಯಿಸಿದರು.
ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮಬಳಗ, ಶ್ರೀದೇವಿಗುರುಕುಲ, ಪಾರ್ವತಿಮಹಿಳಾ ಮಂಡಳಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಆಯೋಜಿಸಿದ್ದ ಪ್ರಸ್ತುತ ರಂಭಾಪುರಿ ಶ್ರೀವೀರಸೋಮೇಶ್ವರ ಜಗದ್ಗುರುಗಳ ೬೮ನೆಯ ಜನ್ಮದಿನೋತ್ಸವ ಉದ್ಘಾಟಿಸಿದರು.
ಪಂಚಪೀಠಗಳಲ್ಲಿ ಪ್ರಥಮ ಪೀಠ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಪೀಠದ ೧೨೧ನೆಯ ಜಗದ್ಗುರುಗಳಾಗಿ ಧರ್ಮ, ಪರಂಪರೆಗೆ ಧಕ್ಕೆ ಬಂದಾಗ ಗಟ್ಟಿ ಧ್ವನಿ ಮೊಳಗಿಸುವ ಡಾ.ವೀರಸೋಮೇಶ್ವರ ಜಗದ್ಗುರುಗಳವರು ಜನ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಗೊಳಿಸುವಲ್ಲಿ ೩೧ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿದ್ದಾರೆಂದರು.
ವೀರಶೈವ ಲಿಂಗಾಯತ ಒಡೆಯುವ ಹುನ್ನಾರವನ್ನು ವಿಫಲಗೊಳಿಸಿ ಎರಡೂ ಒಂದೇ ಎಂಬ ಸತ್ಯ ಸಂಗತಿಯನ್ನು ಜಗತ್ತಿಗೆ ಸಾರುವಲ್ಲಿ ಪ್ರಸ್ತುತ ಜಗದ್ಗುರುಗಳವರ ಪಾತ್ರ ಗಣನೀಯ ಒಲವು-ನಿಲುವುಗಳು ಸನಾತನ ಪರಂಪರೆಗೆ ಪೂರಕವಾಗಿತ್ತೆಂಬ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಪೂಜ್ಯರ ಪೀಠವಿರುವ ಲೋಕಸಭಾಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ತಮ್ಮ ಸೌಭಾಗ್ಯ. ಅವರ ಆಶೀರ್ವಾದ ಬಲದಿಂದ ಪ್ರೇರಣೆ ಪಡೆದಿರುವುದಾಗಿ ನುಡಿದರು.
ಧರ್ಮದ ಜೊತೆಗೆ ರಾಷ್ಟ್ರಹಿತ, ಸಮಾಜಹಿತ, ರೈತಹಿತಕ್ಕೆ ಪೂರಕವಾದ ಬೋಧನೆಗಳನ್ನು ನಿರಂತರವಾಗಿ ಮಾಡುತ್ತಿರುವ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಜನ್ಮದಿನ ಹಾಗೂ ಪೀಠಾರೋಹಣದ ವರ್ಧಂತಿ ಮಹೋತ್ಸವವನ್ನು ನಗರದಲ್ಲಿ ಕಳೆದ ಮೂರುದಶಕಗಳಿಂದ ಆಚರಿಸಲಾಗುತ್ತಿದೆ ಎಂದ ಜಂಗಮಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಈ ಬಾರಿ ಕೇಂದ್ರಸಚಿವೆ ಶೋಭಾಕರಂದ್ಲಾಜೆ ಗುರುನಾಮನ ಸಲ್ಲಿಸಿರುವುದು ವಿಶೇಷ ಎಂದರು.
ಜಿ.ಪಂ.ಮಾಜಿಸದಸ್ಯ ಕಲ್ಮರುಡಪ್ಪ, ನಗರಸಭಾ ಸದಸ್ಯ ಮಧುರಾಜಅರಸ್, ನಿವೃತ್ತ ಗ್ರಂಥಪಾಲಕ ಡಾ.ನರೇಂದ್ರ, ಪತ್ರಕರ್ತ ಸುಮಂತ್ನೆಮ್ಮಾರ್, ಅಭಾಸಾಪ ಜಿಲ್ಲಾಸಮಿತಿ ಸದಸ್ಯ ಹಯವದನರಾವ್, ಯುವಮುಖಂಡ ಶಶಿಆಲ್ದೂರ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
ಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಮತ್ತು ಸಹಕಾರ್ಯದರ್ಶಿ ಪಾರ್ವತಿಬಸವರಾಜ್ ಆಚಾರ್ಯಗೀತೆ ಪ್ರಸ್ತುತಪಡಿಸಿದರು.
ಶ್ರೀರೇಣುಕಾಚಾರ್ಯ ಮಂದಿರದಲ್ಲಿಂದು ರುದ್ರಾಭಿಷೇಕ, ವಿಶೇಷಪೂಜೆ ನೆರವೇರಿತು. ಯು.ಎಂ.ಬಸವರಾಜ್ ನೇತೃತ್ವದಲ್ಲಿ ಆಸ್ಪತ್ರೆ ಮತ್ತು ವಿದ್ಯಾರ್ಥಿನಿಲಯದಲ್ಲಿ ಸಿಹಿ ಮತ್ತು ಹಣ್ಣು ವಿತರಿಸಲಾಯಿತು. ಜೀವನಸಂಧ್ಯಾ ವೃದ್ಧಾಶ್ರಮವಾಸಿಗಳಿಗೆ ಶ್ರೀಪೀಠದಿಂದ ಪ್ರಸಾದವ್ಯವಸ್ಥೆ ಮಾಡಲಾಗಿತ್ತು.
Rambhapuri Sriveerasomeshwara Jagadguru’s 68th Birth Anniversary