ಚಿಕ್ಕಮಗಳೂರು: ಯಾವುದೇ ಮಹಾನ್ ವ್ಯಕ್ತಿಗಳ ಹೆಸರಿನ ಜಯಂತಿ ಎದೆಯ ಮೇಲೆ ಬ್ಯಾಡ್ಜ್ ಇದ್ದರೆ ಸುಖವಿಲ್ಲ. ಅವರ ತತ್ವಾದರ್ಶ ಒಳಗೆ ಲಾಡ್ಜ್ ಆದರೆ ನಮ್ಮ ಬದುಕು ಅಕ್ನಾಲೆಡ್ಜ್ ಆಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಿಸಿದರು.
ಅವರು ಇಂದು ನಗರದ ಕೆಎಸ್ಆರ್ಟಿಸಿ ಘಟಕದ ಆವರಣದಲ್ಲಿ ಕೆಎಸ್ಆರ್ಟಿಸಿ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ೫೩೬ ನೇ ಕನಕಜಯಂತೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.
ಈಗಿನ ಸರ್ಕಾರ ೫ ಗ್ಯಾರಂಟಿ ಕೊಟ್ಟಿದ್ದಾರೆ, ನಮ್ಮ ಬದುಕಿಗೆ ಪ್ರಕೃತಿಯೇ ಗ್ಯಾರಂಟಿ ಕೊಟ್ಟಿದೆ. ರಸ್ತೆ, ಕುಡಿಯುವ ನೀರು, ಗಾಳಿ, ಶಿಕ್ಷಣ, ಆರೋಗ್ಯ ಈ ಐದು ಜಾತ್ಯಾತೀತ ಕೊಡುಗೆಗಳಾಗಿವೆ ಎಂದು ಹೇಳಿದರು.
ದೇಹ ಮತ್ತು ದೇಶ ಸೌಖ್ಯವಾಗಿರಿಸಿಕೊಳ್ಳಬೇಕು. ದೇಹವನ್ನು ಸೌಖ್ಯವಾಗಿರಿಸುವವನು ರೈತ, ದೇಶವನ್ನು ಸೌಖ್ಯವಾಗಿರಿಸುವವರು ಯೋಧ. ಗನ್-ಪೆನ್ನು ಇವೆರಡೂ ಇದ್ದಾಗ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ವಿಶ್ಲೇಷಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸನ್ಮಾನಿತರಾಗುವವರ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುವಂತೆ ಅವರಿಗೆ ಉಚಿತ ಬಸ್ಪಾಸ್ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಲ್ಲಿ ವಿನಂತಿಸಿದ ಅವರು ಇದು ಜಾರಿಗೆ ಬಂದಾಗ ಸನ್ಮಾನಿಸಿದ್ದಕ್ಕೆ ನಿಜ ಅರ್ಥ ಬರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ತಮ್ಮಯ್ಯ ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್, ಕನಕದಾಸರು, ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಈ ಎಲ್ಲಾ ಮಹಾನ್ ಪುರುಷರ ಉದ್ದೇಶ ಒಂದೇ ಆಗಿತ್ತು. ಶೋಷಿತರ ಪರ ಧ್ವನಿ ಎತ್ತಿ ಸಮಾನತೆ ಕಾಪಾಡುವುದು ಅವರ ವಿಚಾರ ಧಾರೆಗಳಲ್ಲಿ ಪ್ರಮುಖವಾಗಿದ್ದವು ಎಂದು ಹೇಳಿದರು.
ಇಂತಹ ಮಹಾನ್ ಪುರಷರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದೆಂದು ಮನವಿ ಮಾಡಿದ ಅವರು ಪ್ರಪಂಚ ಇರುವವರೆಗೆ ಅವರ ವಿಚಾರಧಾರೆಗಳು ಜೀವಂತವಾಗಿರುತ್ತವೆ ಎಂಬುದಕ್ಕೆ ಇಂದು ಜಯಂತಿ ಆಚರಣೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು.
ಸಾವಯವ ಕೃಷಿ ಮೂಲಕ ಪತ್ರಕರ್ತರಾಗಿದ್ದ ಚಂದ್ರಶೇಖರ್ ನಾರಾಯಣಪುರ ಒಳ್ಳೆಯ ಬದುಕನ್ನು ಸಮಾಜಕ್ಕೆ ನೀಡಿದ್ದಾರೆ, ಸೈನಿಕರ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಕುಲಕುಲ ಎಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಕನಕದಾಸರು ಅಂದೇ ಹೇಳಿದ್ದರು. ಇವರೆಲ್ಲರ ಜಯಂತಿ ಆಚರಣೆಯಲ್ಲಿ ಭಾಗವಹಿಸುವ ಮೂಲಕ ಈ ಮಹಾನ್ ಪುರಷರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಅಗತ್ಯ ಎಂದರು.
ಇದುವರೆಗೆ ಸರಳವಾಗಿ ಕಚೇರಿಯಲ್ಲಿ ಕನಕಜಯಂತಿ ಆಚರಿಸುತ್ತಿದ್ದು, ಈ ಬಾರಿ ೫೩೬ ನೇ ಜಯಂತಿಯನ್ನು ಅದ್ದೂರಿಯಾಗಿ ವೇದಿಕೆ ಮೂಲಕ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲಾ ನೌಕರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಜಿ.ಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಅವರ ತತ್ವಾದರ್ಶಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಲು ಹಾಗೂ ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿ ಎಂಬುದು ಜಯಂತಿಯ ಉದ್ದೇಶ ಎಂದು ಹೇಳಿದರು.
ಇಂದಿನ ಹಳಿ ತಪ್ಪಿದ ಬದುಕಿನಲ್ಲಿ ಹೊಸ ಉತ್ಸಾಹದಿಂದ ಜೀವನದ ಉದ್ದೇಶವನ್ನು ಮಹಾನ್ ಪುರುಷರ ಆದರ್ಶಗಳು ಒಳ್ಳೆಯ ಮಾರ್ಗದಲ್ಲಿ ನಡೆಯಲು ಗಣ್ಯರ ಜೀವನ ಮಾರ್ಗದರ್ಶಿಯಾಗಿದೆ. ಕನಕಜಯಂತಿ ಆಚರಣೆ ನಿಜಕ್ಕೂ ಸಂತೋಷ ತಂದಿದೆ ಎಂದರು.
ಹೆಣ್ಣು ಮಕ್ಕಳಿಗೆ ಸರ್ಕಾರದ ಶಕ್ತಿ ಯೋಜನೆ ಮೂಲಕ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬೇಕಾದ ಕಡೆ ಕೆಲಸಕಾರ್ಯದಲ್ಲಿ ತೊಡಗಲು ಕಾರಣವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಪಂಡಿತ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ನಾರಣಾಪುರ, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ರಾಜಣ್ಣ, ವಕೀಲ ಅನೀಲ್ಕುಮಾರ್, ವಸ್ತಾರೆಯ ನಿವೃತ್ತ ಯೋಧ ಎಂ.ಎಂ ಪ್ರಕಾಶ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜ್ ವಹಿಸಿದ್ದರು. ಸಹಾಯಕ ಲೆಕ್ಕಾಧಿಕಾರಿ ಕೆ.ಎ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಅಧಿಕಾರಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಬೇಬಿ ಸ್ವಾತಿಸಿದರು.
536th Kanakajayantotsava ceremony organized by KSRTC Kuruba Employees Welfare Association