ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ೨೪.೫ ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಐ.ಡಿ.ಎಸ್.ಜಿ ಕಾಲೇಜು ಆವರಣದಲ್ಲಿ ಸೋಮವಾರ ಶಾಸಕ ಎಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಸಾರ್ವಜನಿಕರ ಬಹುದಿನದ ಬೇಡಿಕೆಯ ಅನ್ವಯ ಎಐಟಿ ವೃತ್ತದ ಸುತ್ತಮುತ್ತ ಓಡಾಡುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಾಣ ಮಾಡಿ ಮಹಾತ್ಮ ಗಾಂದಿಯವರ ಕನಸಿನಂತೆ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ೨೪.೫ ಲಕ್ಷ ರೂ ವೆಚ್ಚದ ಸುಸರ್ಜಿತ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರವಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಕೆಲಸವನ್ನು ಮಾಡುತ್ತಿದ್ದು, ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರು ಚುನಾವಣಾ ಪೂರ್ವದಲ್ಲಿ ೫ ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದು ಅದರನ್ವಯ ೪ ಗ್ಯಾರಂಟಿಗಳನ್ನು ಪೂರ್ಣಗೊಳಿಸಲಾಗಿದ್ದು, ೫ನೇ ನಿಧಿಯಾದ ಯುವನಿಧಿ ಗ್ಯಾರಂಟಿಯನ್ನು ಜ.೧೨ ರಂದು ಕಾಲೇಜು ಪದವಿದರರು ಹಾಗೂ ಡಿಪ್ಲೊಮಾ ಪದವಿದರರ ಖಾತೆಗೆ ನೇರವಾಗಿ ಹಣವನ್ನು ಹಾಕಲು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದರು.
ಹೇಳಿದಂತೆ ೫ ಭರವಸೆಗಳನ್ನು ಪೂರೈಸಿದ ಏಕೈಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ನಮ್ಮ ಸರ್ಕಾರ ಅಭಿವೃದ್ಧಿ ಮತ್ತು ಗ್ಯಾರಂಟಿಯನ್ನು ಸಮಾನಾಂತರದಲ್ಲಿ ನಡೆಸಿಕೊಂಡು ಬರುತ್ತಿದೆ, ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿ ಪಥದಕಡೆಗೆ ಸಾಗುತ್ತದೆ ಹಾಗೂ ಜಿಲ್ಲೆಗೆ ಅಗತ್ಯವಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ೧ ವರ್ಷದ ಒಳಗಾಗಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ಬಹುದಿನಗಳಿಂದ ಶೌಚಾಲಯದ ಬೇಡಿಕೆ ಇದ್ದು, ಶಾಸಕರ ಸೂಚನೆಯಂತೆ ತುರ್ತು ಟೆಂಡರ್ ಕರೆದು, ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡುವಂತೆ ಸೂಚನೆಯನ್ನು ನೀಡಲಾಗಿತ್ತು, ಅದರಂತೆ ಇಂದು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪಿಡಿ ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಐಡಿಎಸ್ಜಿ ಕಾಲೇಜು ಪ್ರಾಂಶುಪಾಲರಾದ ಚಾಂದಿನಿ, ನಗರಸಭೆ ಸದಸ್ಯ ಸಿ.ಪಿ.ಲಕ್ಷ್ಮಣ್, ಕುಮಾರ್, ಜಾವಿದ್, ನಗರಸಭೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
MLA H. D. Tammaiah laid the foundation stone in the premises of IDSG College on Monday