ಚಿಕ್ಕಮಗಳೂರು: ಬಿಸಿಯೂಟ ಅಡುಗೆ ತಯಾರಕರಿಗೆ ಅಡುಗೆ ಬಗ್ಗೆ ಮಾಹಿತಿ ನೀಡಿ ತರಬೇತಿ ಸ್ಪರ್ಧೆ ಏರ್ಪಡಿಸಿದ್ದು, ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಕರೆ ನೀಡಿದರು.
ಅವರು ಇಂದು ಮಲೆನಾಡು ವಿದ್ಯಾಸಂಸ್ಥೆಯಲ್ಲಿ ೨೦೨೩-೨೪ನೇ ಸಾಲಿನ ಜಿ.ಪಂ, ತಾ.ಪಂ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಕ್ಷರದಾಸೋಹ ಮುಖ್ಯ ಅಡುಗೆಯವರ ಹಾಗೂ ಸಹಾಯಕ ಅಡುಗೆಯವರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ಯಾಸ್ ಬಳಕೆ ಮಾಡುವಾಗ ಆಗುವ ಬೆಂಕಿ ಅವಗಡಗಳನ್ನು ತಪ್ಪಿಸುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ಅಪಘಾತ ಸಂಭವಿಸಿದಾಗ ಅದಕ್ಕೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ತಿಳಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಪಿಇಟಿ ಮಾಡಿಸುತ್ತೇವೆಂದರು.
ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ನಿರ್ವಹಣೆ ಕುರಿತು ಮಾಹಿತಿ ಪಡೆಯುವುದು ಅಗತ್ಯವಾಗಿದೆ. ಅಡುಗೆ ಕೋಣೆಯಲ್ಲಿ ತಾವುಗಳಿಗೆ ಸಮಸ್ಯೆ ಎದುರಾದಾಗ ಅದರಿಂದ ಪಾರಾಗುವ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಿ ಎಂದು ಹೇಳಿದರು.
ಶಾಲಾ ಅವಧಿಯಲ್ಲಿ ಮಕ್ಕಳು ಅಡುಗೆ ಪಾತ್ರೆಯಲ್ಲಿ ಬೀಳದಂತೆ ಎಚ್ಚರ ವಹಿಸಬೇಕು. ರಾಜ್ಯಾದಂತ ಈಗಾಗಲೇ ಆಗಿರುವ ಅವಗಡಗಳು ಪುನಹಾ ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಅದಕ್ಕಾಗಿ ಈ ರೀತಿಯ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಬಿಸಿಯೂಟ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ ಸರ್ಕಾರ ಕಳೆದ ೨೩ ವರ್ಷಗಳಿಂದ ಹಲವಾರು ತರಬೇತಿ ಕಾರ್ಯಕ್ರಮ ರೂಪಿಸಿ, ಸುಸಜ್ಜಿತ ಅಡುಗೆ ತಯಾರಕರನ್ನಾಗಿ ಮಾಡಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ನೀಡುವ ಸಂದರ್ಭದಲ್ಲಿ ಅಡುಗೆ ತಯಾರು ಮಾಡುವಾಗ ಏನೆಲ್ಲಾ ಕಾನೂನು ನಿಭಾಯಿಸಬೇಕು, ನಿಗಧಿತ ಸಮಯಕ್ಕೆ ಊಟ ಬಡಿಸಬೇಕು ಎಂಬ ಬಗ್ಗೆ ಮತ್ತು ಶುಚಿ-ರುಚಿ ಕುರಿತು ತರಬೇತಿ ನೀಡುತ್ತಿರುವುದನ್ನು ಸ್ವಾಗತಿಸುತ್ತೇನೆಂದರು.
ಪ್ರಸ್ತುತ ಅಡುಗೆಯವರಿಗೆ ನೇರ ಅವರ ಖಾತೆಗೆ ಹಣ ಬರುತ್ತಿದೆ. ಮೊದಲು ಎಸ್ಡಿಎಂಸಿ ಅವರಿಂದ ಪಡೆಯಬೇಕಿತ್ತು. ಅಡುಗೆ ತಯಾರಕರಿಗೆ ಸುಟ್ಟ ಗಾಯಗಳಾದರೆ ತುರ್ತಾಗಿ ೩೦ ಸಾವಿರ ರೂ ಪರಿಹಾರ ನೀಡಲು ಅವಕಾಶವಿದೆ. ಇದೇ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದರು.
ಕುಕ್ಕರ್, ಅಗ್ನಿ ಅವಘಡಗಳಾಗುತ್ತಿವೆ. ಈ ಬಗ್ಗೆ ಹೆಣ್ಣು ಮಕ್ಕಳು ಮುನ್ನಚ್ಚರಿಕೆ ಕ್ರಮ ವಹಿಸಬೇಕು, ಸರ್ಕಾರ ಬಿಸಿಯೂಟ ಕಾರ್ಯಕರ್ತರಿಗೆ ವಾರ್ಷಿಕ ೧೦ ರಜೆಗಳನ್ನು ನೀಡುತ್ತಿದ್ದು, ಸಂಘಟನೆಯ ಬಲವಾದ ಹೋರಾಟದಿಂದ ಈ ಜಿಲ್ಲೆಯಲ್ಲಿ ಸೌಲಭ್ಯಗಳು ದೊರೆಯುವ ಜೊತೆಗೆ ಪುರಸ್ಕಾರಗಳು ಬಂದಿವೆ ಎಂದು ತಿಳಿಸಿದರು.
ಮುಂದಿನ ಫೆ.೧೧ ರಂದು ರಂಗಣ್ಣನ ಛತ್ರದಲ್ಲಿ ಜಿಲ್ಲೆಯ ಎಲ್ಲಾ ಬಿಸಿಯೂಟ ಕಾರ್ಯಕರ್ತರ ೫ ಶಾಸಕರೂ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಈ ಸಮಾವೇಶಕ್ಕೆ ನೀವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಮಾವೇಶದ ಉದ್ದೇಶ ಸರ್ಕಾರ ೬ನೇ ಗ್ಯಾರಂಟಿಯಾಗಿ ಬಿಸಿಯೂಟ ಕಾರ್ಯಕರ್ತರಿಗೆ ಮಾಸಿಕ ೬ ಸಾವಿರ ರೂ ವೇತನ ನೀಡುವುದಾಗಿ ಭರವಸೆ ನೀಡಿದ್ದನ್ನು ಸ್ಮರಿಸಿದ ಅವರು ಈ ಕುರಿತು ಜಿಲ್ಲೆಯ ಆಡಳಿತ ಪಕ್ಷದ ೫ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಅಧ್ಯಾಪಕರು ಬಿಸಿಯೂಟ ಕಾರ್ಯಕರ್ತರನ್ನು ಗೌರವಯುತವಾಗಿ ಕಾಣಬೇಕೆಂದು ವಿನಂತಿಸಿದರು.
ಪ್ರಾಸ್ತಾವಿಕ ಸಹಾಯಕ ನಿರ್ದೇಶಕ ಉದಯ್ಕುಮಾರ್ ಮಾತನಾಡಿ ಬಿಸಿಯೂಟ ಕಾರ್ಯಕರ್ತರು ಬೆಂಕಿ ಅವಘಡಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರ ಇತ್ತೀಚಿಗೆ ವಿವಿಧ ಬಗೆಯ ಆಹಾರ ತಯಾರಿಕೆಯ ಬಗ್ಗೆ ಮೆನು ನೀಡಿದ್ದು, ಅದರಂತೆ ಬೆಳಗ್ಗೆ ಹಾಲು, ಮಧ್ಯಾಹ್ನ ಊಟ, ಬಾಳೇಹಣ್ಣು, ಮೊಟ್ಟೆ ಕೊಡುವುದರ ಜೊತೆಗೆ ಸ್ವಚ್ಚತೆ ಕಡೆ ಗಮನಹರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷ ರಘು, ಸಮನ್ವಯಾಧಿಕಾರಿ ನಾಗರಾಜ್, ಇಂದುಮತಿ, ದೇವೇಂದ್ರಪ್ಪ, ಅರವಿಂದ್, ಲಕ್ಷ್ಮಿ, ಶಾರದಮ್ಮ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
Akshardasoh Training Workshop for Head Cooks and Assistant Cooks