ಚಿಕ್ಕಮಗಳೂರು: ಶ್ರೀಗುರು ಸಿದ್ದರಾಮೇಶ್ವರರ ವಿಚಾರಧಾರೆಗಳನ್ನು ಹಾಗೂ ಅವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹಾನ್ ಪುರುಷರ ಜಯಂತಿಗೆ ಅರ್ಥ ಬರುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಬಣ್ಣಿಸಿದರು.
ಅವರು ನಿನ್ನೆ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ವತಿಯಿಂದ ಹಲವಾರು ಮಹಾನ್ ಪುರಷರ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ, ಸಿದ್ದರಾಮೇಶ್ವರ ಜಯಂತಿಗಳು ಅವರ ಉದ್ದೇಶ ಸಮಾಜದಲ್ಲಿ ಸಮಾನತೆ ಕಾಣಬೇಕೆಂಬುದು ಆಗಿತ್ತು ಎಂದು ಹೇಳಿದರು.
ಈ ಮಹಾನ್ ಪುರುಷರ ಆಚರಣೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಾಗಬಾರದು ಎಂದು ನನ್ನ ಆಶಯ. ಸಮಾಜದ ಎಲ್ಲಾ ಜನರನ್ನು ಜೋಡಿಸಿಕೊಂಡು ಮಹಾನ್ ಪುರಷರ ಜಯಂತಿ ಆಚರಣೆ ಆಗಬೇಕೆಂಬುದು ನನ್ನ ಉದ್ದೇಶ ಎಂದು ತಿಳಿಸಿದರು.
೧೨ನೇ ಶತಮಾನದಲ್ಲಿಯೇ ಸಮಾನತೆಗಾಗಿ ಹೋರಾಡಿದವರು ಜಗಜ್ಯೋತಿ ಬಸವಣ್ಣನವರು. ಇವರ ಜೊತೆ ಸಮಕಾಲೀನರಾಗಿ ಸೇವೆ ಸಲ್ಲಿಸಿದ ಹಲವಾರು ಮಹಾನ್ ಪುರಷರಿದ್ದಾರೆ. ಅವರಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬರಾಗಿದ್ದಾರೆ ಎಂದರು.
ಸಮಾನತೆಗಾಗಿ ಹೋರಾಟ ಮಾಡಿದ ಎಲ್ಲಾ ಮಹಾನ್ ಪುರಷರ ಉದ್ದೇಶ ಒಂದೇ ಆಗಿತ್ತು. ಈ ಕಾರಣಕ್ಕೆ ಸಾವಿರಾರು ವರ್ಷಗಳು ಕಳೆದರೂ ಇನ್ನೂ ಸಹ ಜಯಂತಿ ಆಚರಣೆಯ ಮೂಲಕ ಜಿವಂತವಾಗಿವೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಅಲ್ಲಿ ಅವರ ವಿಚಾರ ದಾರೆಗಳನ್ನು ಭಕ್ತರಿಗೆ ತಿಳಿಸುವ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ, ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನಗಳನ್ನು ಸಮಾಜಕ್ಕೆ ಬಿತ್ತಿದರು ಎಂದು ವರ್ಣಿಸಿದರು.
ಅಧ್ಯಕ್ಷತೆಯನ್ನು ಉಪ ತಹಸೀಲ್ದಾರ್ ಪ್ರಸನ್ನ ವಹಿಸಿದ್ದರು, ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಚಿಂತಕರಾದ ಸಾಹಿತಿ ಕತ್ತಿಗೆ ಚನ್ನಪ್ಪ ಪ್ರಧಾನ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಕೀಲ ಬಿ.ಆರ್ ಜಗದೀಶ್, ಭೋವಿ ಜನಾಂಗದ ಮುಖಂಡ ಚಂದ್ರಶೇಖರ ಭೋವಿ, ನೊಳಂಬ ಸಮಾಜದ ಮುಖಂಡ ಎಂ.ಸತೀಶ್, ಹೆಚ್.ಪಿ ಮಂಜೇಗೌಡ, ಎಂ.ಸಿ ಶಿವಾನಂದಸ್ವಾಮಿ, ಎಸ್.ಎಂ ರಾಜಪ್ಪ, ದಾಸ ಭೋವಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಮೇಶ್ ಸ್ವಾಗತಿಸಿದರು
Shri Shivayogi Siddarameshwar Jayanti