ಚಿಕ್ಕಮಗಳೂರು: ಮಹಿಳೆಯರು ಹೆಚ್ಚಾಗಿ ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಹಾಗೂ ಅವರ ಭದ್ರತೆಗಾಗಿ ಸರ್ಕಾರ, ಚುನಾಯಿತಿ ಪ್ರತಿನಿಧಿಗಳು ಕೆಲಸ ಮಾಡಬೇಕಾಗಿರುವುದು ಅಗತ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೩-೨೪ ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೋವರ್ಸ್ ಘಟಕಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಮಗೆ ಮಾರ್ಗದರ್ಶಕರವಾಗಿ ಆದರ್ಶಪ್ರಿಯ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ, ಮೊದಲ ಐಪಿಎಸ್ ಅಧಿಕಾರಿ ಕಿರಣ್ಬೇಡಿ ಮತ್ತಿತರರ ಸೇವೆಯನ್ನು ಸ್ಮರಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರು ಸ್ವಾತಂತ್ರ್ಯಾ ನಂತರ ರಚಿಸಿದ ಸಂವಿಧಾನ ಪ್ರಪಂಚದಲ್ಲೇ ಮತ್ತೊಬ್ಬರು ರಚಿಸಲು ಸಾಧ್ಯವಿಲ್ಲ, ಸಂವಿಧಾನದ ಆಶಯ ಕೇವಲ ಸಮಾನತೆಗಾಗಿ ಆಗಿರದೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರಾಮಾಣಿಕ ಪ್ರಯತ್ನದಿಂದ ಶ್ರದ್ಧೆ, ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರೆ ಸಂಸ್ಕಾರವಂತರಾಗುವ ಜೊತೆಗೆ ದೊಡ್ಡ ದೊಡ್ಡ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಈಗಾಗಲೇ ಡಯಟ್ ಆವರಣದಲ್ಲಿ ೨ ಎಕರೆ ಜಾಗವನ್ನು ಮೀಸಲಿರಿಸಲಾಗಿದ್ದು, ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಕಾಲೇಜು ಕಟ್ಟಡಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಗಿರಿಮಂದಾರ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಇಡೀ ಪ್ರಪಂಚದಲ್ಲೇ ಪ್ರಾಧ್ಯಾಪಕರ ಕೊರತೆ ಇದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ನೀವುಗಳು ವೈದ್ಯರು, ಇಂಜಿನಿಯರ್ಗಳು ಆಗಲು ಸಾಧ್ಯವಿಲ್ಲ. ವಕೀಲರು ಆಗಬಹುದು. ಇಲ್ಲವೇ ಪ್ರಾಧ್ಯಾಪಕರಾಗಬಹುದು. ಬೇರೆ ಬೇರೆ ಹುದ್ದೆಗಳಲ್ಲಿಯೂ ಮುಂದುವರೆಯಬಹುದಾಗಿದೆ ಎಂದರು.
ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಉತ್ತಮವಾದ ಶಿಕ್ಷಕರು, ಪ್ರಾಧ್ಯಾಪಕರ ಅಗತ್ಯವಿದ್ದು, ಸರ್ಕಾರಗಳು ಈ ಕೊರತೆಯನ್ನು ನೀಗಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರಾಗುವಂತೆ ಕರೆ ನೀಡಿದರು.
ಶಿಕ್ಷಣ ಮತ್ತು ಆರೋಗ್ಯ ಸಂವಿಧಾನ ಬದ್ದವಾದ ಹಕ್ಕುಗಳಾಗಿದ್ದು, ಯಾವ ವ್ಯಕ್ತಿಗೆ ವೃದ್ಧಾಪ್ಯದಲ್ಲಿ ತನ್ನ ಆರ್ಥಿಕ ಭದ್ರತೆಯನ್ನು ಸಂವಿಧಾನ ಬದ್ದವಾದ ಹಕ್ಕು ಇದ್ದರೂ ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.
ಚುನಾಯಿತ ಪ್ರತಿನಿಧಿಗಳಿಗೆ ಕಾಲ ಕಾಲಕ್ಕೆ ತಮಗೆ ತಿಳಿಯದೆಯೇ ಭತ್ಯೆ, ವೇತನ ಬರುತ್ತದೆ. ಆದರೆ ಸರ್ಕಾರಿ ನೌಕರರು ಹಾಗೂ ಗುತ್ತಿಗೆ ಶಿಕ್ಷಕರು ಈ ಹಕ್ಕನ್ನು ಪಡೆಯಲು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ|| ನಟೇಶ್ ಎಸ್.ಎಂ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ|| ಮಹೇಶ್ವರಪ್ಪ, ಡಾ. ಲೋಕೇಶ್ ನಾಯ್ಕ, ಪ್ರೊ|| ದೀಕ್ಷಿತ್ ಕುಮಾರ್, ದೇವರಾಜ್ ಎಂ.ಎನ್, ಪ್ರೊ|| ಲೋಕೇಶ್ಗೌಡ ಡಿ.ಕೆ, ಕುಮಾರಿ ಹೇಮಮಾಲಿನಿ, ಎಸ್.ಡಿ.ಎಂ.ಸಿ ಸದಸ್ಯರಾದ ದೃವಕುಮಾರ್, ಮಾಜಿ ನಗರಸಭೆ ಸದಸ್ಯೆ ತೆರೆಸಾ ಲೋಬೋ, ರಾಜಶೇಖರ್, ಚೈತ್ರ, ರವಿ, ಅಮರ್, ಸದಾಶಿವ ಮತ್ತಿತರರು ಇದ್ದರು. ಪ್ರಾರಂಭದಲ್ಲಿ ಸಾಂಸ್ಕೃತಿಕ ವೇದಿಕೆ ಹಾಗು ಕಾಲೇಜು ವಾರ್ಷಿಕ ಸಂಚಿಕೆ ಸಂಚಾಲಕ ಡಾ. ಶ್ರೀನಿವಾಸ್ ಕೆ.ಆರ್ ಸ್ವಾಗತಿಸಿದರು.
Cultural and sports day of the academic year of Government First Class College for Women