ಚಿಕ್ಕಮಗಳೂರು: ಸಹಕಾರ ಸಂಘದಿಂದ ಸಾಲಪಡೆದು ೪೩೯.೭ ಕೋಟಿ ರೂ. ಸುಸ್ತಿದಾರನಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾಡಿರುವ ಸಾಲವನ್ನು ರಾಜ್ಯ ಸರಕಾರ ವಸೂಲಿ ಮಾಡಬೇಕು ಎಂದು ಆಮ್ಆದ್ಮಿ ಪಕ್ಷದ ಮಾಧ್ಯಮ ವಕ್ತಾರ ಡಾ. ಕೆ.ಸುಂದರಗೌಡ ಒತ್ತಾಯಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಶಾಸಕ ರಮೇಶ್ ಜಾರಕಿಹೊಳಿ ಅವರು ೧೦ ವರ್ಷದ ಹಿಂದೆ ಸಹಕಾರ ಸಂಘದಿಂದ ೨೫೦ ಕೋಟಿ ರೂ.ಸಾಲ ಪಡೆದಿದ್ದು ಆ ಸಾಲದ ಮೊತ್ತ ಈಗ ೪೩೯.೭ ಕೋಟಿ ರೂ. ಆಗಿದೆ. ಅವರ ಮೇಲೆ ಎಫ್ಐಆರ್ ದಾಖಲಾಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರ ಕೂಡ ಸಾಲ ವಸೂಲಿ ಮಾಡುವ ಸಂಬಂಧ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಸಹಕಾರ ಸಂಘದಲ್ಲಿನ ರೈತರ ಹಣವನ್ನು ತುಂಬುವವರು ಯಾರು ಎಂದು ಪ್ರಶ್ನಿಸಿದರು.
ಜವಾಬ್ದಾರಿ ಮರೆತ ರಾಜ್ಯ ಸರಕಾರ, ಎಲ್ಲ ರಾಜಕೀಯ ಪಕ್ಷಗಳು ಸಾಲಗಾರನ ರಕ್ಷಣೆಗೆ ನಿಂತಿರುವುದು ಹಾಸ್ಯಾಸ್ಪದವಾಗಿದೆ. ಸಾಮಾನ್ಯ ರೈತನೊಬ್ಬ ಸಹಕಾರ ಬ್ಯಾಂಕಿನಲ್ಲಿ ಸಾಲ ಸಿಗದೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಮನೆ ಮಠ ಮಾರಿಕೊಳ್ಳುವಂತಹ ಸ್ಥಿತಿಯನ್ನು ಸರಕಾರವೇ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು.
ಇಂತಹ ಸುಸ್ತಿ ಸಾಲಗಳಿಂದಾಗಿ ಅರ್ಹ ರೈತರಿಗೆ ಸಾಲ ನೀಡಲು ಸಹಕಾರ ಸಂಘಗಳಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶೀಘ್ರ ರಮೇಶ್ಜಾರಕಿಹೊಳಿ ಸಾಲ ವಸೂಲಾತಿಗೆ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಸಾಮಾನ್ಯ ರೈತರಿಗೆ, ಸಹಕಾರ ಸಂಘದ ಸದಸ್ಯರಿಗೆ ನೈತಿಕ ಬಂಬಲ ನೀಡಬೇಕು ಎಂದು ಆಗ್ರಹಿಸಿದರು.
ಸರ್ಫೆಸಿ ಕಾಯಿದೆ ಮೂಲಕ ಕಾಫಿ ಬೆಳೆಗಾರರ ತೋಟಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸುತ್ತಿರುವುದನ್ನು ಎಎಪಿ ಖಂಡಿಸುತ್ತದೆ ಎಂದರು. ಆಮ್ಆದ್ಮಿ ಪಾರ್ಟಿಯ ಮುಖಂಡರಾದ ಅಕ್ಕಿದಿನೇಶ್, ವಿಲಿಯಂ ಪೆರೇರಾ, ಸುನಿಲ್, ಸಲ್ಮಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.
Aam Aadmi Party Media Spokesperson Dr. K. Sundar Gowda