ಚಿಕ್ಕಮಗಳೂರು : ಧರ್ಮ ಬೋಧನೆಯ ಜೊತೆಗೆ ರಾಜ್ಯದಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಮೂಲಕ ಮಕ್ಕಳಿಗೆ ಶಿಕ್ಷಣ ತಲುಪಿಸುವಂತ ಮಹತ್ತರವಾದ ಕೆಲಸವನ್ನು ಭೈರವಕ್ಯ ಜಗದ್ಗುರು ಬಾಲಗಂಗಾಧರ ನಾಥ ಸ್ವಾಮೀಜಿಯವರು ಮಾಡಿದ್ದಾರೆ ಎಂದು ಸ್ಕೌಟ್ ಮತ್ತು ಗೈಡ್ಸ್ ನ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್ ತಿಳಿಸಿದರು.
ಗುರುವಾರ ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯುಗಯೋಗಿ ಪದ್ಮಭೂಷಣ ಪುರಸ್ಕೃತ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತ್ಯೋತ್ಸವ ಹಾಗೂ ೧೧ನೇ ವರ್ಷದ ಪುಣ್ಯಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅತ್ಯಂತ ಕಡಿಮೆ ದಿನಗಳ ಜೀವಿತಾವಧಿಯಲ್ಲಿಯೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.
ಸ್ವಾಮೀಜಿಗಳು ತಮ್ಮ ದಿವ್ಯದೃಷ್ಟಿಯ ಮೂಲಕ ಕಾಲೇಜು ಅಭಿವೃದ್ಧಿ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನೂ ಕೂಡಾ ಸ್ವತಃ ಗಮನಿಸುತ್ತಿದ್ದರು ಎಂದರು.
ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆದಿದ್ದರ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆ ಜೊತೆಗೆ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಕಾಲೇಜಿನಲ್ಲಿ ಓದಿರುವ ಕೆಲವರು ಸ್ವಂತ ಇಂಜಿನಿಯರಿಂಗ್ ಕಾಲೇಜುಗಳನ್ನೇ ಕಟ್ಟಿದ್ದಾರೆ ಇದಕ್ಕೆಲ್ಲ ಪ್ರೇರಣೆಯಾಗಿ ವಿವಿಧ ಸ್ಥರಗಳಲ್ಲಿ ಬೆಳಸಿದ್ದು ಸ್ವಾಮೀಜಿಯವರ ಕೃಪಾಕಟಾಕ್ಷ ಎಂದು ಎಂದು ಹೇಳಿದರು.
ಮಕ್ಕಳಿಗೆ ಜ್ಞಾನಾರ್ಜನೆ ಮಾಡಿ, ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವನ್ನು ಆದಿಚುಂಚನಗಿರಿ ಸಂಸ್ಥೆ ನೀಡುತ್ತಿದೆ. ಕೇವಲ ಪಠ್ಯವಷ್ಟೇ ಅಲ್ಲದೆ ಪಠೇತರ ಚಟುವಟಿಕೆಗಳನ್ನೂ ಕೂಡಾ ಆಯೋಜನೆ ಮಾಡುತ್ತಿದ್ದಾರೆ ಈ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಕ್ರೀಡೆಯಲ್ಲಿ ಗೆಲ್ಲುವುದಷ್ಟೇ ಅಲ್ಲ ಅದರಲ್ಲಿ ಭಾಗವಹಿಸುವುದೂ ಕೂಡಾ ಪುಳಕಿತವಾದ ಅವಕಾಶ. ಒಬ್ಬ ಮನುಷ್ಯ ಆರೋಗ್ಯಕರವಾಗಿ ಬದುಕಬೇಕಾದರೆ ದೈಹಿಕ ಸಾಮರ್ಥ್ಯ ಕೂಡಾ ಮುಖ್ಯ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ೯೨೫ ಗಂಡು ಮಕ್ಕಳಿಹೆ ೯೭೫ ಹೆಣ್ಣು ಮಕ್ಕಳಿರುವ ಜಿಲ್ಲೆ, ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ಕೊಡುವುದು ಚಿಕ್ಕಮಗಳೂರು ಜಿಲ್ಲೆಯ ವಿಶೇಷತೆಯಾಗಿದೆ ಎಂದರು.
ಬಿಜಿಎಸ್ ಪ್ರೌಡಶಾಲಾ ವಿಭಾಗದ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಆದಿಚುಂಚನಗಿರಿ ಮಠದ ಫೀಠಾಧ್ಯಕ್ಷರಾಗಿ ೪೦ ವರ್ಷದಲ್ಲೇ ಯಾವ ಮನುಷ್ಯನೂ ಮಾಡಲಾಗದ ಮಹತ್ತರವಾದ ಸಾಧನೆ ಮಾಡಿ ಎಲ್ಲರಿಗೂ ದಾರಿ ದೀಪವಾಗಿದ್ದವರು ಶ್ರೀಗಳು. ಒಂದು ಶಾಲೆಯಿಂದ ಆರಂಭವಾದ ಟ್ರಸ್ಟ್ ಇಂದು ದೇಶದಾದ್ಯಂತ ೫೬೩ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದೆ. ಈ ಸಾಧನೆಯನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಗೌರವ ಕೊಟ್ಟು ಸೌಮ್ಯ ಸ್ವಭಾವದಿಂದ ವರ್ತಿಸುತ್ತಿದ್ದ ಶ್ರೀಗಳು ಇಂದು ನಮ್ಮೊಟ್ಟಿಗಿಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಿಂಧು ಬುಕ್ಸ್ ಡಿಸ್ಟ್ರಿಬ್ಯೂಟರ್ಸ್ ನ ಎನ್.ಸಿ ಶಿವಸ್ವಾಮಿ, ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ ಸುರೇಂದ್ರ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Jagadguru Sri Dr. 79th birth anniversary of Balagangadharnath Swamiji