ಚಿಕ್ಕಮಗಳೂರು: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನಗಳಿಗೆ ಸಂಬಂಧಿಸಿದಂತೆ ನಿಗಧಿತ ಸಮಯಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಬೇಕು, ಕಾಲಮಿತಿಯಲ್ಲಿ ಗುರಿ ಸಾಧಿಸಬೇಕು ಎಂದ ಅವರು ಅನುದಾನ ಬಾಕಿ ಉಳಿದರೆ ಆಯಾ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದರು.
ಪ್ರತಿ ಇಲಾಖೆಗೆ ಬಿಡುಗಡೆಯಾಗುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿ ಸಂಬಂಧಪಟ್ಟ ಇಲಾಖೆ ಅಥವಾ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಳ್ಳಬೇಕು, ಮುಂದಿನ ಸಭೆಯೊಳಗೆ ಪ್ರತಿ ಇಲಾಖೆಯಿಂದ ಶೇ ೧೦೦ ರಷ್ಟು ಪ್ರಗತಿ ಸಾಧಿಸಲೇಬೇಕು ಎಂದು ತಾಕೀತು ಮಾಡಿದರು.
ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಮಗಾರಿಗಳ ಬಗ್ಗೆ ಗಮನ ಹರಿಸಬೇಕು ಕಳೆದ ಸಾಲಿನಲ್ಲಿನ ಅನುದಾನವನ್ನು ಸಮರ್ಪಕವಾಗಿ ಬಳಸಿರುವ ಕುರಿತ ವರದಿಯನ್ನು ಎಲ್ಲಾ ಇಲಾಖೆಗಳು ಪ್ರತಿ ತಿಂಗಳು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Zilla Panchayat Chief Executive Dr. Gopalakrishna