ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆಲ್ಫಿ ವಿತ್ ನನ್ನ ರಾಮ ಎನ್ನುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜನವರಿ ೨೨ ಸಂಜೆ ವರೆಗೆ ನಡೆಯಲಿದೆ.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಭಾನುವಾರ ಪಕ್ಷದ ವಿವಿಧ ಮುಖಂಡರು ಶ್ರೀರಾಮಚಂದ್ರನ ಭಾವಚಿತ್ರದೊಂದಿಗೆ ಸೆಲ್ಫಿ ತೆಗೆದುಕೊಂಡು ಕ್ಯೂಆರ್ ಕೋಡ್ಗೆ ಅಪ್ಲೋಡ್ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಜಿಲ್ಲಾ ಬಿಜೆಪಿ ನಿಯೋಜಿತ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ಇಡೀ ಜಗತ್ತಿನ ಕೋಟ್ಯಾಂತರ ಹಿಂದೂಗಳ ಹೃದಯ ಸಾಮ್ರಾಟ ಶ್ರೀರಾಮನ ಜನ್ಮ ಸ್ಥಳದವಾದ ಅಯೋಧ್ಯೆಯಲ್ಲಿ ನಾಳೆ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಎಲ್ಲಡೆ ಹಬ್ಬದ ವಾತಾವರಣದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಎಲ್ಲಾ ಹಿಂದೂ ಬಾಂಧವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ನಾಳಿನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಈಗಾಗಲೇ ಜೋಡಿಸಿಕೊಂಡಿರುವಂತೆ ಪೂಜೆ, ಹೋಮ, ಹವನಗಳು, ಭಜೆ, ಸಂಕೀರ್ತನೆಗಳು ನಡೆಯಲಿದ್ದು ಅದರಲ್ಲಿ ಎಲ್ಲರೂ ತೊಡಗಿಸಿಕೊಂಡು ಪ್ರಭು ಶ್ರೀರಾಮಚಂದ್ರನ ಕೃಪೆಗೆ ಪಾತ್ರರಾಗಬೇಕು ಎಂದರು.
೫೦೦ ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ. ಹಿಂದೂಗಳು ಒಗ್ಗಟ್ಟಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕು ಎಂದರು.
ನಮ್ಮ ಊರು, ಗ್ರಾಮಗಳ ಎಲ್ಲಾ ಮಠ, ಮಂದಿರಗಳಲ್ಲಿ ಸ್ವಚ್ಛತೆ ಕಾರ್ಯ ಮುಗಿಸಿದ್ದೇವೆ. ನಾಳೆ ಪೂಜೆ ಇನ್ನಿತರೆ ಧಾರ್ಮಿಕ ವಿಧಿಗಳು ನಿರಂತರ ನಡೆಯಲಿವೆ. ಎಲ್ಲ ಕಡೆ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ. ಪ್ರತೀ ಮನೆಗಳಲ್ಲಿ ೫ ಹಣತೆಗಳನ್ನು ಹಚ್ಚಬೇಕು ಎಂದು ನಮ್ಮ ಹಿರಿಯರು ಕರೆ ಕೊಟ್ಟಿದ್ದಾರೆ. ಅದೇ ಪ್ರಕಾರ ಎಲ್ಲಾ ಮನೆಗಳಲ್ಲಿ ದೀಪಗಳನ್ನು ಹಚ್ಚಬೇಕು ಎಂದು ಮನವಿ ಮಾಡಿದರು.
ಶ್ರೀರಾಮಚಂದ್ರನ ಭಾವಚಿತ್ರದೊಂದಿಗೆ ಸೆಲ್ಫಿ ತೆಗೆದುಕೊಂಡ ನಂತರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಸಂದರ್ಭದಲ್ಲಿ ನಾಲ್ಕು ಮಾಹಿತಿಗಳನ್ನು ಕೇಳುತ್ತದೆ ಅದನ್ನು ತುಂಬಿ ಅಪ್ಲೋಡ್ ಮಾಡಿದರೆ ನಮ್ಮ ಪಕ್ಷದ ರಾಜ್ಯ ಘಟಕಕ್ಕೆ ರವಾನೆ ಆಗಲಿದೆ ಎಂದರು
ಯುವ ಮೋರ್ಚಾ ಜಿಲ್ಲಾರ್ಧಯಕ್ಷ ಸಂತೋಷ್ ಕೋಟ್ಯಾನ್, ಬಿಜೆಪಿ ಉಪಾಧ್ಯಕ್ಷ ಡಾ.ನರೇಂದ್ರ, ಹಿರಿಯ ಮುಖಂಡರುಗಳಾದ ನಾರಾಯಣ ಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ಜಯರಾಂ, ಮುಗುಳವಳ್ಳಿ ದಿನೇಶ್, ಪುಷ್ಪರಾಜ್, ಬಸವರಾಜ್ ಇತರರು ಭಾಗವಹಿಸಿದ್ದರು.
Selfiewith Nanna Ram campaign launched