ಚಿಕ್ಕಮಗಳೂರು: ಬಿಜೆಪಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭ ಜ.೩೧ರಂದು ಬುಧವಾರ ಪಕ್ಷದ ಪಾಂಚಜನ್ಯ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಸಿ ಕಲ್ಮರುಡಪ್ಪ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಎಮ್.ಆರ್ ದೇವರಾಜಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದೆ ಶೋಭಾಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ ರವಿ, ಜೀವರಾಜ್, ಎ.ಎಸ್ ಪಾಟೀಲ್ ನಡಹಳ್ಳಿ ಸೇರಿದಂತೆ ಪಕ್ಷದ ಎಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ನಾನು ನಾಲ್ಕು ವರ್ಷ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಸಲಹೆ, ಸಹಕಾರ, ಬೆಂಬಲದೊಂದಿಗೆ ಅವಧಿಯನ್ನು ಪೂರ್ಣಗೊಳಿಸಿರುವುದು ನನಗೆ ತೃಪ್ತಿ ತಂದಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ರಾಜ್ಯ ರಾಷ್ಟ್ರ ನಾಯಕರಿಗೆ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ. ಪ್ರಸ್ತುತ ರಾಜ್ಯ ಬಿಜೆಪಿ ನನ್ನನ್ನು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ ಎಂದು ತಿಳಿಸಿದರು.
ಶತ ಶತಮಾನಗಳ ಹಿಂದೂಗಳ ಕನಸು ನನಸು ಮಾಡುವಲ್ಲಿ ಸ್ಪಂದಿಸಿರುವ ಮತ್ತು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿಮಾರ್ಣದೊಂದಿಗೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮೂಲಕ ರಾಮರಾಜ್ಯ ಸ್ಥಾಪಿಸಿರುವ ವಿಶ್ವ ಗುರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಜಿಲ್ಲಾ ಬಿಜೆಪಿ ಅಭಿನಂದಿಸುತ್ತದೆ. ಅಂದು ಜಿಲ್ಲೆಯ ದೇವಾಲಯಗಳಲ್ಲಿ ಭಜನೆ, ಸಂಕೀರ್ತನಾ ಯಾತ್ರೆ, ಅಭಿಶೇಕ, ಪ್ರಸಾದ ವಿನಿಯೋಗ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಶ್ರದ್ಧಾ ಭಕ್ತಿಯಿಂದ ಮರ್ಯಾದ ಪುರುಷ ಶ್ರೀರಾಮಚಂದ್ರರನ್ನು ಆರಾಧಿಸಿರುವ ಜಿಲ್ಲೆಯ ಜನರಿಗೆ ಅಭಿನಂದಿಸಿದರು.
ಅಯೋಧ್ಯೆ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಧ್ವಂದ್ವ ನೀತಿ ಅನುಸರಿಸುತ್ತಿದ್ದು, ಅವರ ಹೇಳಿಕೆಗಳು ಗೊಂದಲಮಯವಾಗಿವೆ. ರಾಮಮಂದಿರ ಕುರಿತು ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುವ ಯತ್ನ ನಡೆಸುತ್ತಿರುವುದನ್ನು ಖಂಡಿಸಿದರು.
ನ್ಯಾಯದ ಹೆಸರಿನಲ್ಲಿ ಭಾರತ್ ಜೋಡೊ ಯಾತ್ರೆ ನಡೆಸುವ ಮೂಲಕ ದೇಶದಲ್ಲಿ ಶಾಂತಿ ಕದಡುವ ಯತ್ನದಲ್ಲಿ ಕಾಂಗ್ರೇಸ್ ತೊಡಗಿದೆ, ಕಾನೂನು ಸುವ್ಯವಸ್ಥೆ ಗಮನದಲ್ಲಿ ಇರಿಸಿಕೊಂಡು ಅಸ್ಸಾಂ ರಾಜ್ಯದಲ್ಲಿ ಯಾತ್ರೆಗೆ ತಡೆಯೊಡ್ಡಿರುವುದನ್ನು ನೆಪವಾಗಿಸಿಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿರುವ ಕ್ರಮವನ್ನು ಖಂಡಿಸಿದ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪಂಜಾಬ್ ರಾಜ್ಯ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಲ್ಲಿನ ರಾಜ್ಯಸರ್ಕಾರಗಳು ಹೇಗೆ ನಡೆಸಿಕೊಂಡಿದ್ದಾರೆ ಎಂಬುದನ್ನು ಜನತೆ ಕಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್, ಉಪಾಧ್ಯಕ್ಷ ಮಂಜುನಾಥ್, ನಗರಾಧ್ಯಕ್ಷ ಮಧುಕುಮಾರ್ರಾಜ್ಅರಸ್, ಮುಖಂಡರುಗಳಾದ ಹೆಚ್.ಎಸ್ ಪುಟ್ಟಸ್ವಾಮಿ, ದಿನೇಶ್, ಸಚಿನ್ ಉಪಸ್ಥಿತರಿದ್ದರು.
Jan. 31 Inauguration ceremony of new president at BJP office