ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಬುಧವಾರ ಬೆಳಗ್ಗೆ ಚಿಕ್ಕಮಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಪ್ರತೀ ಕೊಠಡಿಯನ್ನೂ ವೀಕ್ಷಣೆ ಮಾಡಿ ತಾಲೂಕು ಆಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಮೊದಲು ಅರ್ಜಿ ಸ್ವೀಕಾರ ಕೇಂದ್ರಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಬಗ್ಗೆ ಸಿಬ್ಬಂದಿಗಳಿಗೆ ಪ್ರಶ್ನಿಸಿದರು. ನಂತರ ರೆಕಾರ್ಡ್ ರೂಂ ಗೆ ತೆರಳಿ ಕಂದಾಯ ಇಲಾಖೆ ಕಡತಗಳ ಡಿಜಿಟಲೀಕರಣದ ನಡೆಯುತ್ತಿರುವುದನ್ನು ಪರಿಶೀಲಿಸಿದರು. ನಂತರ ಭೂಮಿ ಕೇಂದ್ರ, ಆಹಾರ ಶಾಖೆ, ಸಾಂಖ್ಯಿಕ ಶಾಖೆ, ಚುನಾವಣಾ ಶಾಖೆ, ಆರ್.ಆರ್.ಟಿ ಶಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಾಖೆ, ಸರ್ವೇ ವಿಭಾಗ ಸೇರಿದಂತೆ ಪ್ರತಿ ಕೊಠಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಕಚೇರಿಯ ಎಲ್ಲ ಕೊಠಡಿಗಳಲ್ಲೂ ಇರುವ ನಿರುಪಯುಕ್ತ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಬೇರೆ ಬೇರೆ ವಿಭಾಗದ ಕಚೇರಿಗೆ ಅವಕಾಶ ಕಲ್ಪಿಸಿಕೊಡಬೇಕು. ಮುಂದಿನ ಬಾರಿ ಭೇಟಿ ನೀಡುವುದರ ಒಳಗಾಗಿ ಎಲ್ಲ ಕೊಠಡಿಗಳೂ ಅಚ್ಚುಕಟ್ಟಾಗಿರಬೇಕು ಎಂದು ತಹಶೀಲ್ದಾರ್ ಸುಮಂತ್ ಗೆ ಖಡಕ್ ಸೂಚನೆ ನೀಡಿದರು.
ಆರ್.ಆರ್.ಟಿ ಶಾಖೆಯೊಳಗೆ ಹೋಗುತ್ತಿದ್ದಂತೆ ಟೇಬಲ್ ಮೇಲಿದ್ದ ಫೈಲ್ ಗಳನ್ನು ಕಂಡು ಕೆಂಡಾ ಮಂಡಲವಾಗಿ, ಪ್ರತಿನಿತ್ಯ ಅಂದಿನ ಕಡತಗಳನ್ನು ಅಂದೇ ಕಂಪ್ಯೂಟರ್ನಲ್ಲಿ ನೋಂದಾಯಿಸಿ ಡೈಲಿ ರಿಪೋರ್ಟ್ ತೆಗೆದು ಕಡತಗಳನ್ನು ಬಿಲೇವಾರಿ ಮಾಡಬೇಕು. ಹದಿನೈದು ದಿನಬಿಟ್ಟು ಮತ್ತೆ ಬರುತ್ತೇನೆ. ಅವತ್ತೂ ಕೂಡಾ ಇದೇ ರೀತಿ ಟೇಬಲ್ ಮೇಲೆ ಕಡತಗಳಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಮೊದಲನೆ ಮಹಡಿ ಹಾಗೂ ಎರಡನೆಯ ಮಹಡಿಗಳಲ್ಲಿ ಸಾಕಷ್ಟು ಕೊಠಡಿಗಳು ಖಾಲಿಯಿದ್ದರೂ ಕೂಡಾ ಸಬ್ ರಿಜಿಸ್ಟ್ರಾರ್ ಕೊಠಡಿ ಬಾಡಿಗೆ ಕೊಠಡಿಯಲ್ಲೇ ಇದೆ ಕೂಡಲೇ ಖಾಲಿ ಇರುವ ಹಾಗೂ ನಿರುಪಯುಕ್ತ ವಸ್ತುಗಳನ್ನು ತುಂಬಿರುವ ಕೊಠಡಿಗಳಿಗೆ ನೆಲ ಮಹಡಿಯಲ್ಲಿನ ಹೆಚ್ಚು ಜನ ಬಾರದ ಯಾವುದಾದರೂ ಕಚೇರಿಯನ್ನು ಸ್ಥಳಾಂತರ ಮಾಡಿ ಕೂಡಲೇ ಉಪನೋಂದಣಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಬೇಕು ಅದರೊಂದಿಗೆ ದಲ್ಲಾಳಿಗಳಿಗೆ ಕಡಿವಾಣ ಹಾಕು ಎಂದು ತಹಶೀಲ್ದಾರ್ ಸುಮಂತ್ ಗೆ ವಾರ್ನಿಂಗ್ ಕೊಟ್ಟರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡತಗಳ ಡಿಜಿಟಲೀಕರಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ರಾಜ್ಯದ ೩೧ ಜಿಲ್ಲೆಗಳಲ್ಲಿಯೂ ಜಿಲ್ಲೆಗೊಂದರಂತೆ ಕೇಂದ್ರ ಸ್ಥಾಪಿಸಿ ಕಡತಗಳನ್ನು ಸ್ಕಾನ್ ಮಾಡಿ ಡಿಜಿಟಲ್ ವಾಲೆಟ್ ನಲ್ಲಿ ಇಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ಎಲ್ಲ ಇಲಾಖೆಗಳಿಗೂ ಇ- ಆಫೀಸ್ ಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಅಷ್ಟೇ ಅಲ್ಲದೆ ಕೆಲ ಖಾಸಗಿ ವ್ಯಕ್ತಿಗಳು ರೆಕಾರ್ಡ್ ರೂಮ್ಗಳಿಗೆ ಬಂದು ಕಡತದಲ್ಲಿನ ದಾಖಲ್ವ್ ತಿದ್ದುವುದು, ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ ಇದನ್ನು ತಡೆಯಲು ಎಲ್ಲ ದಾಖಲೆಗಳನ್ನು ಇ-ಆಫೀಸ್ ಮೂಲಕ ಡಿಜಿಟಲೀಕರಣ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಎಲ್ಲಾ ಕಚೇರಿಗಳಲ್ಲೂ ಲಕ್ಷಾಂತರ ಫೈಲ್ ಗಳು ಸ್ಕಾನ್ ಮಾಡಲು ಸಿಬ್ಬಂದಿಗಳು ಕೊರತೆ ಇದೆ. ಹಾಗಾಗಿ ಟೆಂಡರ್ ಕರೆದು ಆ ಮೂಲಕ ಶೀಘ್ರವಾಗಿ ಎಲ್ಲ ಕಡತಗಳನ್ನು ಸ್ಕ್ಯಾನ್ ಮಾಡಿಸಲಾಗುವುದು. ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಸ್ಕ್ಯಾನಿಂಗ್ ಕಾರ್ಯ ಆಮೆ ಗತಿಯಲ್ಲಿ ನಡೆಯುತ್ತಿರುವುದಕ್ಕೆ ತಮ್ಮ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತಹಶೀಲ್ದಾರ್ ಡಾ. ಸುಮಂತ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
District In-charge Secretary Rajendra Kumar Kataria visited the taluk office